
ಮಡಿಕೇರಿ ಅ.17 NEWS DESK : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಸಂದರ್ಭದಲ್ಲೆ ದೇಶ ಭಕ್ತ ಸಂಘಟನೆಯ ವಿರುದ್ಧ ತುಚ್ಛವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆಯ ಧೋರಣೆಗಳನ್ನು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಶತಮಾನೋತ್ಸವದ ಸಂದರ್ಭ ನಡೆದ ಪಥ ಸಂಚಲನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಹಲವು ಮಂದಿ ಗಣವೇಷ ಧರಿಸಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆ ಆರ್‍ಎಸ್‍ಎಸ್ ವಿರುದ್ಧವಾದ ಹೇಳಿಕೆಗಳಿಗೆ ಕಾಂಗ್ರೆಸ್‍ನ ಎಲ್ಲರನ್ನು ದೂಷಿಸುವುದಿಲ್ಲ. ಆದರೆ, ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದದಿಂದಷ್ಟೆ ಸಚಿವರಾಗಿರುವ ಪ್ರಿಯಾಂಕ ಖರ್ಗೆಯವರ ನಿಲುವುಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ತೀಕ್ಷ್ಣವಾಗಿ ನುಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭಗಳಲ್ಲೆಲ್ಲ ಮುಸಲ್ಮಾನರನ್ನು ಎತ್ತಿ ಕಟ್ಟುವ, ಹಿಂದೂಗಳನ್ನು ಟೀಕಿಸುವ ಪ್ರವೃತ್ತಿಯನ್ನು ಕಾಣುತ್ತಿರುವುದಲ್ಲದೆ, ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕಾರ್ಯವೂ ನಡೆಯುತ್ತದೆ. ಜಿಲ್ಲೆಯಲ್ಲಿ ದಶಕಗಳ ಹಿಂದೆ ನಡೆದ ಪಾಲೂರು ಘಟನೆಯ ಹಂತದಲ್ಲಿ ನೂರಾರು ಹಿಂದೂಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದನ್ನು ಅವರು ಉಲ್ಲೇಖಿಸಿದರು. ಹಿಂದೂ ಸಮಾಜವನ್ನು ಪಡೆಯುವ ಪ್ರಯತ್ನವಾಗಿ ಇಂತಹ ಹೇಳಿಕೆಗಳ ಮೂಲಕ ಬೆಂಕಿ ಹಚ್ಚುವ ಪ್ರಯತ್ನಗಳು ನಡೆಯುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿ ಆರ್‍ಎಸ್‍ಎಸ್ ಕಾರ್ಯಚಟುವಟಿಕೆಗಳಿಗೆ ಸರ್ಕಾರಿ ಜಾಗವನ್ನು ನೀಡಕೂಡದೆನ್ನುವ ಪ್ರ್ರಿಯಾಂಕ ಖರ್ಗೆಯವರ ಹೇಳಿಕೆಗೆ, ಈ ಜಾಗವೇನು ಅವರ ಸ್ವಂತದ್ದೆ ಎಂದು ಪ್ರಶ್ನಿಸಿ, ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ ಆರ್‍ಸ್‍ಎಸ್ ಚಟುವಟಿಕೆಗಳಿಗೆ ಸರ್ಕಾರಿ ಜಾಗ ನೀಡುವುದಿಲ್ಲವೆಂದು ನಿರ್ಧಾರ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು. ನಗರಸಭಾ ಸದಸ್ಯ ಎಸ್.ಸಿ.ಸತೀಶ್ ಮಾತನಾಡಿ, ತಂದೆಯ ನೆರಳಲ್ಲೆ ಬೆಳೆದಿರುವ ಪ್ರಿಯಾಂಕ ಖರ್ಗೆ ಅವರಿಗೆ ಆರ್‍ಎಸ್‍ಎಸ್ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಶಾಂತಿಯುತವಾದ ರಾಜ್ಯವನ್ನು ಅಶಾಂತಿಯ ಬೀಡನ್ನಾಗಿಸಲು ಇವರು ನೀಡುತ್ತಿರುವ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲವೆಂದು ತೀಕ್ಷ್ಣವಾಗಿ ನುಡಿದರು. ಮೊಗೇರ ಸೇವಾ ಸಮಾಜದ ಮಾಜಿ ಅಧ್ಯಕ್ಷರಾದ ಪಿ.ಎಂ. ರವಿ ಅವರು ಮಾತನಾಡಿ, ಗೊತ್ತುಗಿರಿ ಇಲ್ಲದೆ ತುಚ್ಛವಾದ ಹೇಳಿಕೆಗಳನ್ನು ನೀಡುವುದಕ್ಕೆ, ಆರ್‍ಎಸ್‍ಎಸ್ ಸಂಘಟನೆಯೇನು ಇಂದು ನಿನ್ನೆಯ ಮಳೆಗೆ ಹುಟ್ಟಿರುವ ಅಣಬೆಯಲ್ಲವೆಂದು ಕಟುವಾಗಿ ನುಡಿದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯಾ ಕಾಲ ಘಟ್ಟದಲ್ಲಿ ರಾಷ್ಟ್ರಾಭ್ಯುದಯಕ್ಕೆ ತನ್ನದೇ ಆದ ಮಹತ್ತರವಾದ ಕೊಡುಗೆಗಳನ್ನು ನೀಡುತ್ತಲೆ ಬಂದಿದೆ. ದೇಶಾಭಿಮಾನವನ್ನು ಹುಟ್ಟು ಹಾಕುವ ಆರ್‍ಎಸ್‍ಎಸ್ ಸಂಘಟನೆ ಇಂತಹ ಹೇಳಿಕೆಗಳಿಂದ ಮತ್ತಷ್ಟು ಗಟ್ಟಿಯಾಗಲಿ, ಸಶಕ್ತವಾಗಲಿದೆಯೆಂದು ದೃಢವಾಗಿ ನುಡಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಪರ ಸಂಘಟನೆಗಳ ರಮೇಶ್ ಹೊಳ್ಳ, ಶಾಂತೆಯಂಡ ಮಂದಣ್ಣ ಉಪಸ್ಥಿತರಿದ್ದರು.









