
ಮಡಿಕೇರಿ NEWS DESK ಅ.17 : ಸಂಸದ ಯದುವೀರ್ ಮೈಸೂರು ರಾಜವಂಶಸ್ಥರ ಉಡುಗೆಯಲ್ಲಿ ಕಾವೇರಿ ತೀಥೋ೯ದ್ವವ ಸಂದಭ೯ ಕಂಗೊಳಿಸಿದ್ದು ವಿಶೇಷವಾಗಿತ್ತು. ತಲೆಗೆ ಮೈಸೂರು ಪೇಟ ಧರಿಸಿದ್ದ ಯದುವೀರ್ ಕೊಡವರೊಂದಿಗೆ ಭಾಗಮಂಡಲದಿಂದ 8 ಕಿ.ಮೀ. ದೂರದ ತಲಕಾವೇರಿಗೆ ಬರೀಕಾಲಿನಲ್ಲಿಯೇ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಸಂಸದರ ಜತೆ ಕಾಲ್ನಡಿಗೆಯಲ್ಲಿಯೇ ಹೆಜ್ಜೆ ಹಾಕಿದರು. ನಮ್ಮ ನಾಡಿನ ಜೀವನದಿ, ಸಕಲ ಜೀವರಾಶಿಗಳಿಗೂ “ತಾಯಿ” ಸ್ವರೂಪಳಾದ ಕಾವೇರಿ ಮಾತೆಯ ತೀರ್ಥೋದ್ಭವದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಧನ್ಯತಾ ಭಾವ ಮೂಡಿಸಿತು ಎಂದು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ತಿಳಿಸಿದ್ದಾರೆ. ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡ ನಂತರ ಹೇಳಿಕೆ ನೀಡಿರುವ ಸಂಸದರು, ಇದೊಂದು ಅಪೂರ್ವ ಕ್ಷಣ ಮತ್ತು ಕಾವೇರಿ ಮಾತೆಯು ತೀರ್ಥ ಸ್ವರೂಪದಲ್ಲಿ ಉಕ್ಕುತ್ತಿದ್ದಂತೆ ಧಾರ್ಮಿಕ ಭಾವನೆಗಳೂ ಉಕ್ಕುತ್ತವೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ನಮ್ಮ ಕೊಡಗು ಜನರು ಹಾಗೂ ನಮ್ಮ ನಾಯಕರೊಂದಿಗೆ ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆಯಲ್ಲಿ ಬಂದಿದ್ದು ನಿಜಕ್ಕೂ ಹೆಮ್ಮೆ ಎನಿಸಿತು. ಇದೊಂದು ಅಪೂರ್ವ ಅವಕಾಶವಾಗಿತ್ತು ಎಂದು ಸಂಸದರು ವಿವರಿಸಿದ್ದಾರೆ. ಕಾವೇರಿ ಮಾತೆ ಸಮೃದ್ಧತೆಯಿಂದ ಕೂಡಿದ್ದರೆ ನಾಡು ಸಮೃದ್ಧವಾಗಿರುತ್ತದೆ. ನಾಡಿನಲ್ಲಿ ಶಾಂತಿ, ನೆಮ್ಮದಿ, ಸುಭಿಕ್ಷೆ ತುಂಬಿರಲಿ ಇದೇ ಸಂದರ್ಭದಲ್ಲಿ ಮನಸಾರೆ ಪ್ರಾರ್ಥಿಸಿದ್ದೇನೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.









