
ಮಡಿಕೇರಿ NEWS DESK ಜು.24 : ಭಾಗಮಂಡಲದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಶಾಖಾಧಿಕಾರಿಗಳ ಕಚೇರಿ ಬೀಳುವ ಹಂತದಲ್ಲಿದೆ. ಈ ಕಟ್ಟಡದಲ್ಲಿ ಗೃಹ ಜ್ಯೋತಿ ಸೌಲಭ್ಯಕ್ಕಾಗಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದು, ಮುಂದೆ ಅನಾಹುತ ಸಂಭವಿಸಿದರೆ ಅದಕ್ಕೆ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುನೀರ್ ಎಂ.ಎ ಎಚ್ಚರಿಕೆ ನೀಡಿದ್ದಾರೆ. ಕಟ್ಟಡ ಶಿಥಿಲಾವಸ್ಥೆಗೊಂಡಿರುವ ಕುರಿತು ಈ ಹಿಂದೆಯೇ ಸಂಬ0ಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದೀಗ ಮಳೆಗಾಲ ಆರಂಭಗೊ0ಡಿದ್ದು, ಯಾವಾಗ ಬೇಕಾದರು ಕಟ್ಟಡ ಬೀಳಬಹುದು. ಅಪಾಯದ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಗೃಹ ಜ್ಯೋತಿ ಗ್ರಾಹಕರಿಗೆ ಸುರಕ್ಷತೆ ಇಲ್ಲದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅನಾಹುತ ಸಂಭವಿಸುವ ಮೊದಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕಟ್ಟಡ ದುರಸ್ತಿ ಆಗುವಲ್ಲಿಯವರೆಗೆ ಪರ್ಯಾಯ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸುವ ಮೂಲಕ ಗ್ರಾಹಕರು ಹಾಗೂ ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.









