
ಮಡಿಕೇರಿ ಅ.21 NEWS DESK : ನಗರದ ಶ್ರೀ ರಾಘವೇಂದ್ರ ದೇವಸ್ಥಾನದ ಬಳಿಯ ಕಲಾ ನಗರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 12ನೇ ವರ್ಷದ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಅ.26 ಹಾಗೂ ನ.22 ರಂದು ರಂದು ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಆರ್.ಮಹೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೆಳಿಗ್ಗೆ 9 ಗಂಟೆಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರಿಡಾಂಗಣದಲ್ಲಿ ಶ್ರೀ ರಾಘವೇಂದ್ರ ದೇವಸ್ಥಾನ ವ್ಯಾಪ್ತಿಯ ನಿವಾಸಿಗಳು, ಸಂಪಿಗೆ ಕಟ್ಟೆ, ಕನ್ನಂಡಬಾಣೆ, ಚೈನ್ ಗೇಟ್ ನಿವಾಸಿಗಳಿಗೆ ಸೀಮಿತವಾಗಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಅಂದು ಕ್ರಿಕೆಟ್ ಪಂದ್ಯಾವಳಿ, ವಿವಿಧ ವಿಭಾಗಗಳಲ್ಲಿ 100 ಮೀಟರ್ ಓಟದ ಸ್ಪರ್ಧೆ, ಹಗ್ಗಜಗ್ಗಾಟ, 50 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ವೇಗದ ನಡಿಗೆ ಸ್ಪರ್ಧೆ, ಮನೋರಂಜನಾ ಸ್ಪರ್ಧೆಗಳು ನಡೆಯಲಿದ್ದು, ಮಧ್ಯಾಹ್ನದ ನಂತರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು. *ಸಾಂಸ್ಕೃತಿಕ ಸ್ಪರ್ಧೆ* ನ.22 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ರಾಘವೇಂದ್ರ ದೇವಸ್ಥಾನದ ಬಳಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದೇ ಸಂದರ್ಭ ಛದ್ಮ ವೇಷ ಸ್ಪರ್ಧೆ, ನಾಟಕ, ನೃತ್ಯ, ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವವರು ಮಂಜುಳಾ 9980683034 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. *ಮಕ್ಕಳ ಮಂಟಪ* ದೀಪಾವಳಿ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ‘ಮಕ್ಕಳ ಮಂಟಪ’ ಪ್ರದರ್ಶನ ಕಾರ್ಯಕ್ರಮ ನ.22 ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ. ಇದರಲ್ಲಿ ಮಂಟಪಗಳನ್ನು ಸಜ್ಜುಗೊಳಿಸುವ ಎಲ್ಲಾ ಮಕ್ಕಳಿಗೂ ಏಕರೂಪದ ಬಹುಮಾನ ನೀಡಲಾಗುತ್ತದೆ. ನಗರವ್ಯಾಪ್ತಿಯ ಎಲ್ಲಾ ಮಕ್ಕಳಿಗೂ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ಆರ್.ಮಹೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾ ವೇದಿಕೆಯ ಕಾರ್ಯಾಧ್ಯಕ್ಷ ಪಿ.ಬಿ.ಸುರೇಶ್, ಕಾರ್ಯದರ್ಶಿ ಪಿ.ಎಂ.ರಮೇಶ್, ಸದಸ್ಯರಾದ ಎಂ.ಟಿ.ಮಧು ಹಾಗೂ ಎಂ.ಸಿ.ಶ್ರೀನಿವಾಸ್ ಉಪಸ್ಥಿತರಿದ್ದರು.









