
ಮಡಿಕೇರಿ ಅ.22 NEWS DESK : ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿ ಅದೃಷ್ಟವಶಾತ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ, ಡಬ್ಬಡ್ಕ ಭಾಗದ ಹೊಸೂರು ಜಯರಾಮ ಅವರ ಪುತ್ರ ಅನುಪಮ್ ಮನೆಗೆ ಕೊಡಗು ವಿಭಾಗಾಧಿಕಾರಿಗಳು, ಮಡಿಕೇರಿ ತಹಶೀಲ್ದಾರರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಸೂಚನೆ ಮೇರೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಮೊದಲಿಗೆ ಅವಘಡ ಸಂಭವಿಸಿದ ಹೊದ್ದೆಟ್ಟಿ ಹೊಳೆ ಜಾಗವನ್ನು ಪರಿಶೀಲಿಸಿ ಬಳಿಕ ನಿರೂಪಮ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಈ ಎಲ್ಲಾ ಘಟನೆಯ ವಿವರವನ್ನು ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ತಲುಪಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ತಿಳಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಹಾಜರಿದ್ದರು.









