
ಮಡಿಕೇರಿ NEWS DESK ಅ.26 : ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭ ಬೆಲ್ಲದ ಬಾಗೇವಾಡಿ ತಾಲ್ಲೂಕಿನ ರಮೇಶ್ ಕತ್ತಿ ಎಂಬುವವರು ವಾಲ್ಮೀಕಿ ಸಮುದಾಯವನ್ನು ಆಕ್ಷೇಪಾರ್ಹ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಎಂ.ಎಸ್.ವೀರೇಂದ್ರ ಹಾಗೂ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಡಾ.ಕಾವೇರಿ ಹೆಚ್.ಎಂ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಶಾಲಾ ಮೈದಾನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ರಮೇಶ್ ಅವರು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ವಾಲ್ಮೀಕಿ ಸಮುದಾಯವನ್ನು ಅವಮಾನಿಸಿದ್ದಾರೆ. ರಾಜ್ಯಾದ್ಯಂತ 75 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯದ ಜನರ ಭಾವನೆಗಳಿಗೆ ದಕ್ಕೆಯಾಗಿದೆ. ಈ ವ್ಯಕ್ತಿ ಹುಕ್ಕೇರಿ ವಿದ್ಯುತ್ ಮಂಡಳಿ ಚುನಾವಣೆಯ ಸಂದರ್ಭವೂ ಇದೇ ರೀತಿ ನಡೆದುಕೊಂಡಿದ್ದು, ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನ ಮಾಡುತ್ತಿದ್ದಾರೆ. ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆ ಮೂಡಿಸುವ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನು ಅವಮಾನಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪರಿಶಿಷ್ಟ ಸಮುದಾಯಗಳ ಭಾವನೆಗಳಿಗೆ ದಕ್ಕೆ ತಂದಿರುವ ಈತನ ವಿರುದ್ಧ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.








