ಸುಂಟಿಕೊಪ್ಪ NEWS DESK ಅ.26 : ಬೀದಿನಾಯಿಗಳ ದಾಳಿಯಿಂದ ಜೀವ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ತೊಂಡೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ, ನಾಯಿಗಳು ಜನರ ಮೇಲೆ ಮಾತ್ರವಲ್ಲದೆ ಜಿಂಕೆಗಳ ಮೇಲೂ ದಾಳಿ ಮಾಡುತ್ತಿವೆ. ಇಂದು ಕೂಡ ಹೆಣ್ಣು ಜಿಂಕೆಯೊಂದನ್ನು ಬೇಟೆಯಾಡಲು ನಾಯಿಗಳು ಹೊಂಚು ಹಾಕಿವೆ. ದಾಳಿ ಮಾಡಿದ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜಿಂಕೆ ಮುಖ್ಯ ರಸ್ತೆಯಲ್ಲಿರುವ ರಾಧಕೃಷ್ಣಪ್ಪ ಎಂಬುವವರ ಮನೆಗೆ ನುಗ್ಗಿದೆ. ತನ್ನ ಜೀವ ಉಳಿಸಿಕೊಳ್ಳಲು ಮನೆ ತುಂಬಾ ಓಡಾಡಿದ ಜಿಂಕೆಯಿಂದ ಮನೆಯೊಳಗಿದ್ದ ಪುಟ್ಟ ಮಗುವಿನ ಆಟಿಕೆಗಳು ಹಾನಿಗೊಂಡಿವೆ. ಮನೆಯಲ್ಲೇ ಆಟವಾಡುತ್ತಿದ್ದ ಮಗು ಅಪಾಯದಿಂದ ಪಾರಾಗಿದೆ. ಆದರೆ ಜಿಂಕೆ ಮನೆಯಿಂದ ಹೊರ ಬಂದು ರಸ್ತೆ ದಾಟಿ ಅರಣ್ಯ ಪ್ರವೇಶಿಸುವಷ್ಟರಲ್ಲಿ ಮತ್ತೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಪ್ರಾಣ ಬಿಟ್ಟಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು 12 ವರ್ಷದ ಜಿಂಕೆಯ ಮೃತದೇಹವನ್ನು ಸ್ಥಳಾಂತರಿಸಿದರು. ಸ್ಥಳಕ್ಕೆ ಆಗಮಿಸಿದ ಜಿ.ಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕೇವಲ ಒಂದೇ ತಿಂಗಳಲ್ಲಿ ಸುಮಾರು 18 ಜಿಂಕೆಗಳು ಬೀದಿನಾಯಿಗಳ ಪಾಲಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಅಮಾಯಕ ವನ್ಯಜೀವಿಗಳು ಬೀದಿ ನಾಯಿಗಳ ಪಾಲಾಗುತ್ತಿದ್ದರೂ ಅರಣ್ಯ ಅಧಿಕಾರಿಗಳು ಹಾಗೂ ಗ್ರಾ.ಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಬೀದಿನಾಯಿಗಳಿಗೆ ಆಹಾರ ಮತ್ತು ಪುನರ್ ವಸತಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಅರಣ್ಯಾಧಿಕಾರಿ ಕೆ.ಎ.ದೇವಯ್ಯ ಅವರು ಮಾತನಾಡಿ ಜಿಂಕೆಗಳ ಸಾವಿನ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಲಿಖಿತ ಮನವಿ ಸಲ್ಲಿಸಲಾಗುವುದು ಎಂದರು. ಈ ಕುರಿತು ಮಾಹಿತಿ ನೀಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಅವರು ಅರಣ್ಯ ಇಲಾಖೆಯ ಮನವಿಯನ್ನು ಆಡಳಿತ ಮಂಡಳಿ ಸಭೆಯಲ್ಲಿಟ್ಟು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.










