
ವಿರಾಜಪೇಟೆ ಅ.27 NEWS DESK : ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ. ಶಿಕ್ಷಣ ಸಾಧನೆಯತ್ತಲೂ ಹೆಚ್ಚು ಸಾಗಬೇಕಾಗಿದೆ. ಆಗ ಮಾತ್ರ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸಲು ಸಾಧ್ಯ ಎಂದು ದುಡಿಯುವ ಮಹಿಳೆಯರ ರಾಜ್ಯ ಸಂಚಾಲಕಿ ಹೆಚ್.ಎಸ್. ಸುನಂದ ಅಭಿಪ್ರಾಯಪಟ್ಟರು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ವತಿಯಿಂದ ವಿರಾಜಪೇಟೆ ಶಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ‘ದುಡಿಯುವ ಮಹಿಳೆಯರ ಕೊಡಗು ಜಿಲ್ಲಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ಬೀದಿಯಲ್ಲಿ ಕಸ ತೆಗೆಯುವ, ತನ್ನದಲ್ಲದ ಮನೆಗಳಲ್ಲಿ ಕಸಮುಸುರೆ ಸ್ವಚ್ಛತೆ ಮಾಡುವ, ತನ್ನದಲ್ಲದ ಮಕ್ಕಳಿಗೆ ಆಹಾರ ಆರೋಗ್ಯ ಶಿಕ್ಷಣಕ್ಕೆ ಕೆಲಸ ಮಾಡುವ, ತನ್ನದಲ್ಲದ ಮನೆಯನ್ನು ಕಟ್ಟುವಲ್ಲಿ ಶ್ರಮ ಹಾಕುವ, ಬೀದಿಬದಿಯಲ್ಲಿ ದುಡಿದು ತನ್ನದಲ್ಲದ ಖಜಾನೆಗೆ ಲಾಭ ಮಾಡಿಕೊಡುವ ತನ್ನದಲ್ಲದ ಬದುಕನ್ನು ಬೇರೆಯವರಿಗೆ ಕಟ್ಟಿಕೊಡುವಲ್ಲೇ ನಿರತರಾದವರನ್ನು ಒಳಗೊಂಡು, ದೇಶದ ರಾಷ್ಟ್ರಾಧ್ಯಕ್ಷರವರೆಗೆ, ವ್ಯೋಮಕ್ಕೆ ಜಿಗಿದು ವಾಪಸ್ ಬಂದ ಆ ಹೆಣ್ಮಗಳ ತನಕವೂ ಎಲ್ಲರೂ ದುಡಿಯುವ ಮಹಿಳೆಯರೇ ಆಗಿದ್ದಾರೆ. ಇವರಲ್ಲಿ ಬಹುತೇಕರು ತಮ್ಮ ಸ್ವಂತ ಬದುಕನ್ನು ಪಣಕ್ಕಿಟ್ಟೇ ಕೆಲಸ ಮಾಡುವವರು. ಕೆಲಸಕ್ಕೆ ಕೂಲಿ ಪಡೆದರೂ ಆದಾಯದ ಪಾಲು ಬಳಸಲು ಹಕ್ಕು ಇಲ್ಲದವಳು, ಇಂದು ಅವರ ಹಕ್ಕಿಗಾಗಿ ಹೋರಾಡಬೇಕಿದೆಯೆಂದು ಮಾರ್ಮಿಕವಾಗಿ ನುಡಿದರು. ದುಡಿಯುವ ಸ್ಥಳಗಳಲ್ಲಿ ಉಸಿರುಗಟ್ಟಿಸುವ ವಾತಾವರಣ ಖಂಡಿಸಿ, ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು. ಸಮಾನ ವೇತನಕ್ಕಾಗಿ, ಹೆರಿಗೆಯ ರಜೆ ಹಕ್ಕಿಗಾಗಿ ಧ್ವನಿ ಎತ್ತಿದರು. ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ, ಮಹಿಳೆಯರ ಕುರಿತು ಸಮಾಜದ ದೃಷ್ಟಿಕೋನ, ಅಭಿರುಚಿ, ಹೆಣ್ಣು ಭ್ರೂಣಹತ್ಯೆ ಮೊದಲಾದ ವಿಚಾರಗಳ ಕುರಿತು ಅವರು ಬೆಳಕು ಚೆಲ್ಲಿದರು. ದೇಶದ ಸಂವಿಧಾನ, ಕಾನೂನು, ಕೋರ್ಟ್ ತೀರ್ಪುಗಳು ಇದಾಗ್ಯೂ ಪ್ರಭುತ್ವವೇ ನಿಂತು ಮಹಿಳಾ ಶ್ರಮ ಶಕ್ತಿಗೆ ಮೌಲ್ಯ ಕಟ್ಟಿಕೊಡುತ್ತಿಲ್ಲ, ಹೆಣ್ಣುಮಕ್ಕಳಿಗೆ ಅಪಾಯಕಾರಿ ಸ್ಥಳಗಳಲ್ಲಿ ರಾತ್ರಿಪಾಳಿ ಕೆಲಸ ಹಾಕುತ್ತಿದೆ. ಕಾರ್ಮಿಕ ಕಾ0iÉ್ದುಗಳನ್ನೆಲ್ಲ ತೆಗೆದು ಕಾರ್ಮಿಕ ಸಂಹಿತೆಗಳನ್ನಾಗಿ ಮಾಡಿ ಹಕ್ಕುಗಳನ್ನೆಲ್ಲ ಕಸಿದು ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಬಲಿ ಕೊಡಲಾಗುತ್ತಿದೆ. ಮಹಿಳೆಯರ ಜೀವಕ್ಕೆ ಬೆಲೆ ಕೊಡದ ಸಮಾಜವನ್ನು ಎದುರು ಹಾಕಿಕೊಂಡು ಸಮಾನತೆಯ ಆಶಯಗಳ ಈಡೇರಿಕೆಗೆ ಹೋರಾಡುತ್ತಲೇ ನಮ್ಮ ತನವನ್ನು ಕಾಪಿಟ್ಟುಕೊಳ್ಳಬೇಕಿದೆ ಎಂದರು. ಮಹಿಳಾ ಕಾರ್ಮಿಕರ ಶೋಷಣಾತ್ಮಕ ಕೆಲಸದ ಪರಿಸ್ಥಿತಿ ವಿರುದ್ಧ ಎಲ್ಲಾ ಕಾರ್ಮಿಕರಂತೆ ತಮಗೂ ನಾಗರಿಕ ಹಕ್ಕುಗಳು ಬೇಕು, 8 ಗಂಟೆಗಳ ಕೆಲಸ ಮತ್ತು ಸಮಾನ ಕನಿಷ್ಟ ವೇತನ, ಮತದಾನದ ಹಕ್ಕುಗಳನ್ನು ಪ್ರತಿಪಾದಿಸಲು ನಡೆಸಲಾದ ಹಕ್ಕೊತ್ತಾಯಗಳಲ್ಲಿ ಅಂತರ್ಗತವಾದ ಅನೇಕ ಬೇಡಿಕೆಗಳನ್ನು ಈಗಲೂ ಪಡೆಯಲು ಬೀದಿಯಲ್ಲೇ ಇದ್ದೇವೆ. ಕೆಲವನ್ನು ಪಡೆದಿದ್ದೇವೆ. ಹಲವನ್ನು ಪಡೆಯಲು ಮುಂದೆ ಸಾಗುತ್ತಿದ್ದೇವೆ. ಆರ್ಥಿಕವಾಗಿ ನಿರ್ಬಲಳು ಎಂದು ದೂಷಿಸುತ್ತಲೇ ಮಹಿಳೆಯರಿಂದಲೇ ಬಹುಪಾಲು ಕೆಲಸ ಮಾಡಿಸುವ ವ್ಯವಸ್ಥೆಯ ರಾಜಕಾರಣ ಬದಲಾಗಬೇಕಿದೆ ಎಂದರು. ಸಿಐಟಿಯುನ ಜಿಲ್ಲಾ ಅಧ್ಯಕ್ಷ ಪಿ.ಆರ್ ಭರತ್ ಮಾತನಾಡಿ ದುಡಿಯುವ ಮಹಿಳೆ ಎಂದರೆ ಯಾರು, ಯಾಕೆ ಮಹಿಳೆಯರ ದುಡಿಮೆಯನ್ನು ಪ್ರಗತಿಯ ಮಾನದಂಡದಲ್ಲಿ ಪರಿಗಣಿಸುತ್ತಿಲ್ಲ. ಮಹಿಳೆಯರ ದುಡಿಮೆ, ಶ್ರಮ ಪರಿಗಣನೆ ಆಗುತ್ತಿಲ್ಲ. ಕೆಲಸ ಮಾಡುವ ವಿಭಿನ್ನ ವಲಯಗಳಾದ ಉತ್ಪಾದನೆ, ಕೃಷಿ, ಸೇವಾ ವಲಯಗಳಲ್ಲಿ ಮಹಿಳಾ ಶ್ರಮ ಶಕ್ತಿಗೆ ಅನೇಕ ಅಡೆತಡೆಗಳಿವೆ. ಇವೇ ತಾರತಮ್ಯಗಳು ಮತ್ತು ಅವುಗಳೇ ದೌರ್ಜನ್ಯಕ್ಕೂ ಕಾರಣಗಳಾಗಿವೆ. ಉದ್ಯೋಗ ರಕ್ಷಣೆ ಇಲ್ಲದಿರುವುದು, ಸಾಮಾಜಿಕ ಸುರಕ್ಷೆ, ಹೆರಿಗೆ ಸೌಲಭ್ಯದಿಂದ ವಂಚಿಸುತ್ತಿರುವುದು ಹೀಗೆ ಇವೆಲ್ಲ ಮಹಿಳಾ ಶ್ರಮ ಶಕ್ತಿಗೆ ಇರುವ ಅಡೆತಡೆಗಳು, ಇಡೀ ಸಮಾಜದ ಬದಲಾವಣೆಗೆ ಪ್ರಜ್ಞಾಪೂರ್ವಕ ಹೋರಾಟ ಮಾಡದೇ ಪ್ರತ್ಯೇಕವಾಗಿ ಮಹಿಳೆಯರ ಮೇಲಿನ ಯಾವುದೇ ಸ್ವರೂಪದ ದಾಳಿ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ನಿವಾರಿಸಲು, ಶೋಷಣೆ ಹೋಗಲಾಡಿಸಲು, ಸಮಾನತೆಯ ಆಶಯ ಸಾಕಾರಗೊಂಡಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ ಎಂದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ, ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ ದುಡಿಯುವ ಮಹಿಳೆಯರ ಗೋಳು ಒಂದೆರಡಲ್ಲ. ಒಟ್ಟಾರೆ ಸಂಘಟಿತ ಅಸಂಘಟಿತ ವಲಯ, ಸೇವಾ ವಲಯಗಳ ಕೆಲಸಗಳಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲಾಗುತ್ತಿದೆ. ದುಡಿಮೆಯಲ್ಲಿ ಖಾಯಂ ಸ್ವರೂಪದ, ಕನಿಷ್ಟ ಕೂಲಿ ಕಾನೂನಿನಡಿ ಬರುವ, ಕೆಲಸದ ಭದ್ರತೆ, ವೇತನ, ಪಿಂಚಣಿ, ರಜೆ ಸೌಲಭ್ಯ ಇತ್ಯಾದಿ. ಮಹಿಳೆಯರ ಕೆಲಸಗಳನ್ನೇ ಗೌಣವಾಗಿಸಿ ಅವರನ್ನು ಅದೃಶ್ಯ ಕಾರ್ಮಿಕರನ್ನಾಗಿಸಲಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಹಕ್ಕುಗಳ ರಕ್ಷಣೆಗೆ ಇರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದರು. ಈ ಸಂದರ್ಭ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮ, ಆದಿವಾಸಿ ಸಂಘಟನೆಯ ಜಿಲ್ಲಾ ಮುಖಂಡರಾದ ಪ್ರೇಮ, ಕಾಫಿ ಕ್ಯೂರಿಂಗ್ ವಕ್ರ್ಸ್ ಜಿಲ್ಲಾಧ್ಯಕ್ಷ ಮಂಜು ಹಾಗೂ ಮುಖಂಡರಾದ ಪುಷ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ವೇದಿಕೆಯಲ್ಲಿದ್ದರು. ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಮಹಿಳಾ ಪ್ರಮುಖರು ಪಾಲ್ಗೊಂಡಿದ್ದರು.









