
ಮಡಿಕೇರಿ NEWS DESK ಅ.29 : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ಅ.31 ರಂದು ಬೆಳಗ್ಗೆ 9.30 ಗಂಟೆಗೆ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಇರುವ ಸ್ಮಾರಕ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಹಾಗೂ ಕೋಟೆ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿಸಲ್ಪಟ್ಟ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವರು ಪಾಲ್ಗೊಳ್ಳುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ನಗರದ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಇರುವ ಸ್ಮಾರಕ ಸ್ಥಳದಲ್ಲಿ ಸ್ವಾತಂತ್ರ‍್ಯ ಹೋರಾಟಗಾರನಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಗುವುದು ಮತ್ತು ಕೋಟೆ ಆವರಣದಲ್ಲಿ ಸಂಸ್ಮರಣಾ ದಿನದ ಸಭಾ ಕಾರ್ಯಕ್ರಮ ನಡೆಯಲಿದೆ. ಸರ್ವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಗೌರವ ಅರ್ಪಿಸಬೇಕೆಂದು ಕೋರಿದ್ದಾರೆ. 1857ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಗುರುತಿಸಲಾಗಿದೆ. ಆದರೆ ಅದಕ್ಕೂ ಮೊದಲೇ ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆದಿರುವ ಬಗ್ಗೆ ಇತಿಹಾಸವಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು 1837 ಅಕ್ಟೋಬರ್ 31 ರಂದು ಬ್ರಿಟಿಷರು ಮಡಿಕೇರಿ ಕೋಟೆ ಆವರಣದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅ.31ರಂದು ವೀರ ಸ್ವಾತಂತ್ರ್ಯ ಹೋರಾಟಗಾರನ ಸಂಸ್ಮರಣೆಯೊಂದಿಗೆ ಗೌರವ ನಮನ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.








