
ಗೋಣಿಕೊಪ್ಪ ನ.1 NEWS DESK : ಹರಿಚಂದ್ರಪುರ ಚೇಂಬರ್ ಆಫ್ ಕಾಮರ್ಸ್ ಕಚೇರಿ ಕಟ್ಟಡ ಮುಂಭಾಗದಲ್ಲಿ ಕನ್ನಡದ ಧ್ವಜಾರೋಹಣ ಮಾಡುವ ಮೂಲಕ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕಲಾವಿದ ನಾರಾಯಣಸ್ವಾಮಿ ನಾಯ್ಡು ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು. ಕನ್ನಡ ನಾಡನ್ನು ಕಟ್ಟಲು ಹಲವಾರು ಮಹನೀಯರು ಹೋರಾಟದ ಮೂಲಕ ತ್ಯಾಗ ಮಾಡಿದ್ದಾರೆ. ಇಲ್ಲಿನ ಭವ್ಯ ಪರಂಪರನೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಕನ್ನಡ ಪರ ಸಂಘಟನೆಗಳು ರಾಜ್ಯೊತ್ಸವವನ್ನು ಗೋಣಿಕೊಪ್ಪ ನಗರದಲ್ಲಿ ಸಂಭ್ರಮದಿಂದ ಆಚರಿಸುವಂತಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾಯ್ಡು ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆಯೆಂದು ಹೇಳಿದರು. ಕಲಾವಿದ ನಾರಾಯಣಸ್ವಾಮಿ ಮಾತನಾಡಿ, ಪ್ರಥಮ ವರ್ಷದ ಆಚರಣೆಯಾಗಿ 70ನೇ ವರ್ಷದ ರಾಜ್ಯೋತ್ಸವವನ್ನು ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ. ಮುಂದಿನ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಕನ್ನಡದ ಹಬ್ಬವನ್ನು ವೈಭವಯುತವಾಗಿ ಆಚರಿಸಲು ಚಿಂತನೆ ಹರಿಸಲಾಗಿದೆ ಎಂದು ಹೇಳಿದರು. ಗೋಣಿಕೊಪ್ಪ ಗ್ರಾಪಂ ಸದಸ್ಯ ಬಿ.ಎನ್ ಪ್ರಕಾಶ್ ಮತ್ತು ಸಾಹಿತಿ, ಡಾ. ಜೆ.ಸೋಮಣ್ಣ, ಗೋಣಿಕೊಪ್ಪ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ, ಗ್ಯಾರೆಂಟಿ ಅನುμÁ್ಠನ ಸಮಿತಿ ತಾಲೂಕು ಸದಸ್ಯ ಖಾಲೀದ್, ರಾಜ್ಯ ಮಾನವ ಹಕ್ಕು ಸಮಿತಿ ಅಧ್ಯಕ್ಷ ಗುರುಸ್ವಾಮಿ, ಕರವೇ ಗೋಣಿಕೊಪ್ಪ ನಗರ ಸಂಚಾಲಕಿ ಸುಚಿತ್ರ ಪಿ.ಸಿ, ಚಿತ್ರ ಕಲಾವಿದ ಮುನ್ನ, ಸರಿನಾ, ಜ್ಯೋತಿ, ಜಾರ್ಜ್ ಸೇರಿದ ಹಲವರು ಇದ್ದರು.









