ವಿರಾಜಪೇಟೆ ನ.3 NEWS DESK : ವಿರಾಜಪೇಟೆಯ ಪುರಸಭೆಯ ವತಿಯಿಂದ ಕಚೇರಿಯ ಮುಂಭಾಗದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿ, ಪ್ರತಿ ವರ್ಷ ನ.1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಏಕೀಕೃತ ರಾಜ್ಯವಾದದ್ದು, ನವೆಂಬರ್ 1, 1973 ರಂದು, ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡು 70 ವರ್ಷ ಪೂರ್ಣಗೊಂಡಿರುವ ಸುದಿನ. ಈ ಬಾರಿಯೂ ನಮ್ಮ ಕನ್ನಡದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನವೆಂಬರ್ 01 ರಂದು ಮಾತ್ರವಲ್ಲದೇ ಇಡೀ ತಿಂಗಳು ರಾಜ್ಯದ ಎಲ್ಲೆಡೆ ಮಾತ್ರವಲ್ಲದೇ ವಿದೇಶಗಳಲ್ಲು ಸಹ ಕನ್ನಡಿಗರು ಕನ್ನಡ ಭಾಷೆಯ ಹಬ್ಬ ಆಚರಿಸುವುದು, ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ನೆನೆದು ಮೆಲುಕುಹಾಕುವುದು ಸಾಮಾನ್ಯ. ಇದೊಂದು ಸಡಗರದ ಹಬ್ಬ ಎಂದರು. ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಮಾತನಾಡಿ ಮೈಸೂರು ರಾಜ್ಯವು (ಈಗಿನ ಕರ್ನಾಟಕ) 1956 ರ ನವೆಂಬರ್ 1 ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕನ್ನಡ ನಾಡು ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ಹೇಳಿದರು. ಉಪಾಧ್ಯಕ್ಷೆ ಫಸಿಹಾ ತಬ್ಸಂ, ಸದಸ್ಯರುಗಳಾದ ಡಿ.ಪಿ. ರಾಜೇಶ್, ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಅಗಸ್ಟಿನ್, ಮಹದೇವ್, ಸುನಿತಾ, ಸೇರಿದಂತೆ ಎಲ್ಲ ಸದಸ್ಯರುಗಳು, ನಾಮ ನಿರ್ದೆಶಿತ ಸದಸ್ಯರುಗಳಾದ ಹಮೀದ್, ರವಿ, ಮೋಹನ್, ದಿನೇಶ್, ಕಚೇರಿ ಸಿಬ್ಬಂದಿಗಳು, ಪೌರ ಕಾರ್ಮೀಕರು ಹಾಜರಿದ್ದರು.











