ಕುಶಾಲನಗರ, ನ.3 NEWS DESK : ಕನ್ನಡ ಭಾಷೆಯನ್ನು ಬಳಸಿ ಉಳಿಸಿ ಬೆಳೆಸಬೇಕಾಗಿದೆ, ಕನ್ನಡದ ಅಸ್ಮಿತೆಯನ್ನು ಕಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ರಂಗಭೂಮಿ ಕಲಾವಿದ ಕೂಡ್ಲೂರಿನ ಭರಮಣ್ಣ ಟಿ.ಬೆಟಗೇರಿ ಮನವಿ ಮಾಡಿದರು. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ಕನ್ನಡ ಭಾಷಾ ಸಂಘದ ವತಿಯಿಂದ ಕುಶಾಲನಗರ ಭಾರತ್ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಕುಶಾಲನಗರ ಲಯನ್ಸ್ ಕ್ಲಬ್ ನ ಸಹಯೋಗದೊಂದಿಗೆ ಶಾಲಾ ಅಂಗಳದಲ್ಲಿ ಏರ್ಪಡಿಸಿದ್ದ 70 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡು- ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವದ ಬಗ್ಗೆ ಮಾತನಾಡಿದರು. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ ಎಂದರು. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವ ಮೂಲಕ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಭರಮಣ್ಣ ಬೆಟಗೇರಿ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಮ್ಮ ಕನ್ನಡದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲಾಗುತ್ತಿದೆ. ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ನೆನೆದು ಮೆಲುಕುಹಾಕುವುದು ನಮ್ಮ ಆದ್ಯ ಕರ್ತವ್ಯ ಎಂದರು. ಭಾರತ್ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಈ ಶಾಲೆಯಲ್ಲಿ ಕನ್ನಡ ಭಾಷಾ ಚಟುವಟಿಕೆಗಳ ಜತೆಗೆ ವಿಜ್ಞಾನ, ಪರಿಸರ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳ ಜತೆಗೆ ಕ್ರೀಡೆ, ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಉತ್ತಮ ಕೌಶಲಗಳನ್ನು ಕಲಿಸುತ್ತಿರುವುದು ಶ್ಲಾಘನೀಯವಾದುದು ಎಂದರು. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಸಂವೃದ್ದಿ ಕುರಿತು ಮಾತನಾಡಿದ ಶಾಲೆಯ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ,
ಕರ್ನಾಟಕ ಏಕೀಕರಣವಾದ ದಿನವೇ ರಾಜ್ಯೋತ್ಸವ ದಿನ. ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1 ರಂದು ಏಕೀಕರಣ ಮಾಡಲಾಯಿತು. ಈ ಏಕೀಕರಣಕ್ಕೆ ಶ್ರಮಿಸಿದವರನ್ನು ನಾವು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕುಶಾಲನಗರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಎನ್.ಟಿ.ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ನಾಡು- ನುಡಿ ,ಸಂಸ್ಕೃತಿಯ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಲಯನ್ಸ್ ಕ್ಲಬ್ ನ ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಕಲೆ,ಸಂಸ್ಕೃತಿಯ ಬೀಡಾದ ಕನ್ನಡನಾಡಿನಲ್ಲಿ ನಾಡು-ನುಡಿ ಬೆಳವಣಿಗೆಗೆ ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು. ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್.ದಯಾನಂದ್,ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಕಿರಣ್ ಕುಮಾರ್, ಸದಸ್ಯರಾದ ಹರೀಶ್ ಗಣಪತಿ , ಕುಮಾರ್, ಸಂಧ್ಯಾ ನಾರಾಯಣ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಾಲಾ ಮಕ್ಕಳು ನಾಡು- ನುಡಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಭಾಷಣ ಹಾಗೂ ಕನ್ನಡ ಗೀತೆಗಳನ್ನು ಹಾಡಿ ಗಮನ ಸೆಳೆದರು.











