

ಮಡಿಕೇರಿ ನ.4 NEWS DESK : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊಂದಿರುವ ಅಂಗವಾಗಿದ್ದು, ಸಾಮಾಜಿಕ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಚಿಕ್ಕ ಅಳುವಾರ ಕೊಡಗು ವಿಶ್ವ ವಿದ್ಯಾನಿಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ 24ನೇ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಆಗುಹೋಗುಗಳನ್ನು ತಿಳಿಸಿ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಪತ್ರಕರ್ತರಿಂದ ಆಗುತ್ತಿದೆ. ಗ್ರಾಮೀಣ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡುವ ಹೆಚ್ಚಿನ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಪತ್ರಕರ್ತರು ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಚಿಂತನೆ ಹೊಂದಿರಬೇಕು ಎಂದರು.
ಆಧುನಿಕ ಡಿಜಿಟಲ್ ಯುಗದಲ್ಲಿ ಪತ್ರಕರ್ತರು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಇವುಗಳನ್ನು ಮೆಟ್ಟಿನಿಂತು ತಾಂತ್ರಿಕವಾಗಿ ಮುಂದುವರೆಯುವಂತೆ ಆಗಬೇಕು. ಹೊಸ ಪೀಳಿಗೆಯ ಪತ್ರಕರ್ತರನ್ನು ಬೆಳೆಸುವಂತಾಗಬೇಕು. ಈ ದಿಸೆಯಲ್ಲಿ ಚಿಕ್ಕ ಅಳವಾರದಲ್ಲಿ ಸಮೂಹ ಸಂವಹನ ಪತ್ರಿಕೋದ್ಯಮ ಆರಂಭಿಸಲಾಗಿದೆಯೆಂದು ತಿಳಿಸಿದ ಅವರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಅನುಕೂಲಕ್ಕಾಗಿ ‘ವಿಜ್ಞಾನ ಹಾಗೂ ತಂತ್ರಜ್ಞಾನ’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆಂದು ತಿಳಿಸಿದರು. ಜಿಲ್ಲೆಯಲ್ಲಿ ಸುಂದರ ಸ್ವಚ್ಛ ಕೊಡಗು ಅಭಿಯಾನ ನಡೆಯುತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಲ್ಲಿನ ಸಂಸ್ಕೃತಿ, ಪರಿಸರದ ಶ್ರೀಮಂತಿಕೆಯನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಅದನ್ನು ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಅಲ್ಲದೇ ಜನತೆ, ಸರ್ಕಾರ ಹಾಗೂ ಸಮುದಾಯದ ಅಭಿವೃದ್ಧಿಯ ನಡುವೆ ‘ಪತ್ರಿಕಾ ಕ್ಷೇತ್ರ’ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಬೇಕೆಂದು ಆಶಿಸಿದರು. ಕೊಡಗಿನ ಪತ್ರಿಕಾ ಪ್ರಪಂಚ ಅರ್ಥಪೂರ್ಣವಾಗಿ ಬೆಳೆದು ಬಂದಿದ್ದು, ರಾಜ್ಯದ ವಿವಿಧ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಇಲ್ಲಿನ ಸಂಸ್ಕೃತಿ ವಿಶೇಷವಾಗಿದ್ದು, ಅದನ್ನು ಪತ್ರಿಕಾ ಮಿತ್ರರು ಉಳಿಸಿ ಬೆಳೆಸಿಕೊಂಡು ಹೋಗಬೇಕು. 24 ವರ್ಷಗಳನ್ನು ಪೂರೈಸಿರುವ ಪತ್ರಿಕಾ ಭವನ ಜ್ಞಾನದ ಕೇಂದ್ರವಾಗಿ, ಯುವ ಪೀಳಿಗೆಗೆ ಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜ್ಞಾನವೆಂಬ ಬೆಳಕಿನ ಕೇಂದ್ರವಾಗಲಿ ಎಂದು ಹಾರೈಸಿದರು. ಮೈಸೂರು ವಿಜಯ ಕರ್ನಾಟಕಪತ್ರಿಕೆಯ ಸ್ಥಾನೀಯ ಸಂಪಾದಕರಾದ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಪತ್ರಿಕೋದ್ಯಮದ ಪವಿತ್ರ ನೆಲೆ ಎಂದರೆ ಅದು ಕೊಡಗು ಎಂದು ಬಣ್ಣಿಸಿ, ನಮ್ಮ ಪ್ರತಿಭೆಯ ಹಿಂದೆ ಸಾಕಷ್ಟು ಹಿರಿಯರ ಕೊಡುಗೆ ಇರುತ್ತದೆ. ನಮ್ಮನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವವರು ಕೂಡ ಗುರುಗಳಾಗುತ್ತಾರೆ. ಯಾರು ಗುರುವನ್ನು ನೆನೆಯುದಿಲ್ಲವೊ, ಗೌರವಿಸುವುದಿಲ್ಲವೊ ಅವರು ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದರು. ಇಂದು ಪತ್ರಕರ್ತರು ನಿರ್ದಿಷ್ಟ ಗುರಿ ಇಲ್ಲದೆ, ಗುರುವಿಲ್ಲದೆ ಮುನ್ನುಗುತ್ತಿದ್ದಾರೆ. ಯುವ ಪತ್ರಕರ್ತರನ್ನು ಗುರಿ ತಪ್ಪಿಸುವ ಕೆಲಸವಾಗುತ್ತಿದೆ. ಗುರುವಿಗೆ ಬೆಲೆ ನೀಡಿದರೆ ಮಾತ್ರ ಉತ್ತಮ ಭವಿಷ್ಯ ದೊರೆಯಲು ಸಾಧ್ಯ. ಆ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಗುರುವಂದನಾ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ ಎಂದರು. ಬರೆಯುವವರೆಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಪತ್ರಕರ್ತರು ಸುದ್ದಿಗೆ ಮಾತ್ರ ಸೀಮಿತವಾಗಬಾರದು. ಸುದ್ದಿಗೆ ಹೊರತಾಗಿ ಸಮಾಜದ ನಡುವೆ ಕೆಲಸ ಮಾಡಬೇಕು. ಪತ್ರಿಕೋದ್ಯಮ ಇಲ್ಲದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಮುಖ ಅಂಗಗಳು ವಿಫಲವಾಗುವ, ಆ ಮುಖೇನ ಅರಾಜಕತೆ ನಿರ್ಮಾಣವಾಗುವ ಅಪಾಯವಿದೆಯೆಂದು ಎಚ್ಚರಿಸಿ, ಸಮಾಜವನ್ನು ಉತ್ತಮ ಮರ್ಗದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸದಾ ಜನತೆಯನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದರು. ವಿದ್ಯಾರ್ಥಿಗಳು ಮಾತನಾಡುವ ಮತ್ತು ಬರೆಯುವ ಕೌಶಲ್ಯ ರೂಢಿಸಿಕೊಂಡರೆ ಉತ್ತಮ ಪರ್ತಕರ್ತರಾಗಬಹುದು. ಪತ್ರಕರ್ತ ಸರ್ವಾಧಿಕಾರಿಯಲ್ಲ. ಸಮಾಜದ ಕನ್ನಡಿಯಾಗಿ ಕೆಲಸ ಮಾಡಬೇಕು. ಯಾರ ಚಾರಿತ್ರ್ಯ ವಧೆಯನ್ನು ಮಾಡಬಾರದು. ಜನರಿಗೆ ಹೆಚ್ಚು ಒಳ್ಳೆಯ ವಿಚಾರಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಿಕಾ ಭವನದ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿಗಳಾದ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ 24ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬೆಳ್ಳಿ ಹಬ್ಬದ ಆಚರಣೆಗೆ ಸಿದ್ಧತೆಯನ್ನು ನಡೆಸುತ್ತಿದೆ. 2001ರಲ್ಲಿ ಕೊಡಗು ಪತ್ರಿಕಾ ಭವನವನ್ನು ಸ್ಥಾಪಿಸುವ ಮೂಲಕ ಪತ್ರಕರ್ತರ ಕಾರ್ಯಚಟುವಟಿಕೆಗಳಿಗೆ ನೆರವಾಗುವ, ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಮಾಜ ಮುಖಿಯಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವುದಾಗಿ ತಿಳಿಸಿದರು. ‘ಪತ್ರಿಕಾ ಭವನ’ ಎನ್ನುವುದು ಕೊಡಗಿನ ಎಲ್ಲಾ ಪತ್ರಕರ್ತರ ತವರು ಮನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕೊಡಗು ಪತ್ರಿಕಾ ಭವನ ಟ್ರಸ್ಟ್ ಮೂಲಕ ಅನಾರೋಗ್ಯಕ್ಕೆ ಒಳಗಾದ ಪತ್ರಕರ್ತರು, ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ಒದಗಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿದೆ. 2024-25ನೇ ಸಾಲಿನಲ್ಲಿ 2.30 ಲಕ್ಷ ವಿದ್ಯಾನಿಧಿಯನ್ನು ಮಕ್ಕಳಿಗೆ ನೀಡಲಾಗಿದೆ. ಭವನದ ಮೇಲಂತಸ್ತುನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆಯಲ್ಲದೆ, ಬೆಳ್ಳಿ ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಯೋಜನೆಯನ್ನು ರೂಪಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ.ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಟಿಆರ್‌ಪಿ ಪೈಪೋಟಿಯಿಂದಾಗಿ ಋಣಾತ್ಮಕ ವಿಚಾರಗಳಿಗೆ, ಸಮಾಜಕ್ಕೆ ಅನಗತ್ಯವಾದ ವೈಯಕ್ತಿಕ ನಿಂದನೆಯ ವಿಚಾರಗಳಿಗೆ ಹೆಚ್ಚಿನ ಒತ್ತು ನಿಡುತ್ತಿವೆ. ಇವುಗಳ ನಡುವೆಯೂ ಪತ್ರಿಕೆಗಳು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ವಿಚಾರಗಳತ್ತ ಹೆಚ್ಚಿನ ಒತ್ತು ನಿಡುವ ಮೂಲಕ ಜೀವಂತವಾಗಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಹೇಳಿದರು. ಕೊಡಗು ಪತ್ರಕರ್ತರ ಸಂಘ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಾ ಬಂದಿದೆ ಎಂದರು. ಹಿರಿಯ ಟ್ರಸ್ಟಿಗಳಾದ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಕೊಡಗಿನ ಪತ್ರಿಕೋದ್ಯಮದಲ್ಲಿನ ಪೈಪೋಟಿಗಳ ನಡುವೆಯೂ ಪರಸ್ಪರರ ಬಗ್ಗೆ ಗೌರವ, ವಿಶ್ವಾಸಗಳು ಸದಾ ನೆಲೆಸಿದೆ. ಮತ್ತೊಂದು ಪತ್ರಿಕೆಯಲ್ಲಿನ ಉತ್ತಮ ವಿಚಾರಗಳನ್ನು ಮೆಚ್ಚಿಕೊಳ್ಳುವ, ಪತ್ರಕರ್ತರ ಉತ್ತಮ ಕಾರ್ಯಗಳನ್ನು ಶ್ಲಾಘಿಸುವಂತಹ ಮನಸ್ಥಿತಿಯನ್ನು ಉಳಸಿಕೊಂಡಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಇದೀಗ ಬೆಳ್ಳಿ ಹಬ್ಬದ ವರ್ಷವನ್ನು ಪ್ರವೇಶಿಸುತ್ತಿದೆ. ಈ ಹಿನ್ನೆಲೆ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸುವ ಚಿಂತನೆಯನ್ನು ಹೊಂದಿದ್ದು, ಇದಕ್ಕೆ ಸರ್ವರ ಸಹಕಾರವನ್ನು ಕೋರಿದರು. :: ಅತಿಥಿಗಳಿಗೆ ಸನ್ಮಾನ :: ಕಾರ್ಯಕ್ರಮದಲ್ಲಿ ಕೊಡಗು ವಿಶ್ವ ವಿದ್ಯಾನಿಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ, ಮೈಸೂರು ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕರಾದ ಐತಿಚಂಡ ರಮೇಶ್ ಉತ್ತಪ್ಪ, ಟ್ರಸ್ಟಿ ಹಾಗೂ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. :: ಬಹುಮಾನ ವಿತರಣೆ :: ಕೊಡಗು ಪತ್ರಿಕಾ ಭವನದ 24ನೇ ವಾರ್ಷಿಕೋತ್ಸವದ ಪ್ರಯುಕ್ತ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರಿಗೆ ನಡೆದ ಟೇಬಲ್ ಟೆನ್ನಿಸ್, ಕೇರಂ, ಚೆಸ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಟ್ರಸ್ಟಿ ಮಧೋಶ್ ಪೂವಯ್ಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಜತ್ ರಾಜ್ ಪ್ರಾರ್ಥಿಸಿದರು, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಸ್ವಾಗತಿಸಿದರು, ಕೋಶಾಧಿಕಾರಿ ಕೆ.ತಿಮ್ಮಪ್ಪ ನಿರೂಪಿದರು, ಟ್ರಸ್ಟಿ ವಿ.ಪಿ.ಸುರೇಶ್ ವಂದಿಸಿದರು. ಜೀವನ್ ಚಿಣ್ಣಪ್ಪ ಅತಿಥಿಗಳ ಪರಿಚಯ ಮಾಡಿದರು.











