ವಿರಾಜಪೇಟೆ ನ.5 NEWS DESK : ಕರ್ನಾಟಕ ಏಕೀಕರಣ ಚಳವಳಿ ಕನ್ನಡ ಭಾಷೆಯನ್ನು ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವನ್ನಾಗಿ ಒಗ್ಗೂಡಿಸಲು ನಡೆದ ಚಳವಳಿಯಾಗಿದೆ. ವಿದ್ಯಾರ್ಥಿಗಳಾದ ನೀವು ಕನ್ನಡ ಭಾಷೆ, ನೆಲ ಜಲದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ನಿವೃತ್ತ ಶಿಕ್ಷಕರಾದ ಹೆಚ್.ಜಿ. ಸಾವಿತ್ರಿ ಹೇಳಿದರು. ಬಾಳುಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ನುಡಿ ಮೃದಂಗ ಸಮಾರಂಭದಲ್ಲಿ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದು, ಪ್ರತಿಯೊಂದು ರಾಜ್ಯಕ್ಕೂ ಅದರದ್ದೆ ಆದ ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ ಮತ್ತು ಪರಂಪರೆ ಇದ್ದೆ ಇರುತ್ತದೆ. ಕರ್ನಾಟಕಕ್ಕೂ ಅಂತಹ ಸುವರ್ಣ ಐತಿಹ್ಯ, ಸಂಸ್ಕೃತಿಯ ಸೊಗಡಿದೆ. ಕನ್ನಡ ರಾಜ್ಯೋತ್ಸವವನ್ನು ನಮ್ಮ ರಾಜ್ಯದ ಐಕ್ಯತೆಯ, ಭಾಷಾ ಹೆಮ್ಮೆ ಮತ್ತು ಸಂಸ್ಕೃತಿಯ ಸ್ಮರಣೆಗಾಗಿ ಪ್ರತಿವರ್ಷ ನ.1 ರಂದು ಆಚರಿಸಲಾಗುತ್ತದೆ. ಈ ದಿನವು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೆಮ್ಮೆಯ ದಿನವಾಗಲಿ ಎಂದರು. ಕನ್ನಡ ರಾಜ್ಯೋತ್ಸವವನ್ನು ಕೇವಲ ಹಬ್ಬವನ್ನಾಗಿ ಅಲ್ಲ, ನಮ್ಮ ಭಾಷೆ, ಸಂಸ್ಕೃತಿ ಮತ್ತು ಗುರುತಿನ ಸಂಕೇತವನ್ನಾಗಿ ಆಚರಿಸಬೇಕು. ಕನ್ನಡ ನಮ್ಮ ಅಸ್ಮಿತೆ. ನಾವು ಕನ್ನಡದ ಪರಂಪರೆ, ಸಾಹಿತ್ಯ, ಕಲೆ, ಸಂಗೀತ ಮತ್ತು ವಿಜ್ಞಾನದಲ್ಲಿ ನಮ್ಮ ಹಿರಿಯರು ಮಾಡಿದ ಕೊಡುಗೆಯನ್ನು ನೆನೆದು ಗೌರವಿಸಬೇಕು. ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾ ಪ್ರೇಮ, ರಾಜ್ಯಾಭಿಮಾನ ಮತ್ತು ಸಾಂಸ್ಕೃತಿಕ ಏಕತೆ ಬೆಳೆಸುವ ಉದ್ದೇಶವನ್ನು ಹೊಂದಿದೆ. ತಾಂತ್ರಿಕ ಯುಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಈ ದಿನವು ಕನ್ನಡವನ್ನು ಉಳಿಸುವ ಮತ್ತು ಬೆಳಸುವ ನವಚೇತನವನ್ನು ನೀಡಲು ಕರ್ನಾಟಕದ ಹುಟ್ಟುಹಬ್ಬವನ್ನು ಆಚರಿಸಬೇಕು ಎಂದರು. ಉಪನ್ಯಾಸಕರಾದ ಬಡಕಡ ಈ. ಪ್ರದೀಪ್ ಮಾತನಾಡಿ ರಾಜ್ಯೋತ್ಸವದ ಆಚರಣೆ ಕೇವಲ ಧ್ವಜಾರೋಹಣ, ಶೋಭಾಯಾತ್ರೆ ಅಥವಾ ನೃತ್ಯಗಳ ಮಟ್ಟಕ್ಕೆ ಸೀಮಿತವಾಗಬಾರದು. ಅದಕ್ಕಿಂತಲೂ ಹೆಚ್ಚು ಕನ್ನಡ ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು. ಕನ್ನಡ ರಾಜ್ಯೋತ್ಸವವು ನಮ್ಮ ರಾಜ್ಯದ ಅಸ್ತಿತ್ವದ ಸ್ಮಾರಕ. ಈ ದಿನ ನಾವು ನಮ್ಮ ಇತಿಹಾಸವನ್ನು ನೆನೆದು, ನಮ್ಮ ಭಾಷೆಯ ಗೌರವವನ್ನು ಎತ್ತಿ ಹಿಡಿಯಬೇಕು. ಕನ್ನಡವನ್ನು ಕೇವಲ ಭಾಷೆಯಾಗಿ ನೋಡದೆ, ಅದು ನಮ್ಮ ಆತ್ಮ, ಸಂಸ್ಕೃತಿ ಮತ್ತು ಅಸ್ತಿತ್ವ ಎಂದು ಮನಗಾಣಬೇಕು ಎಂದರು. ಶಾಲೆಯ ಪ್ರಾಂಶುಪಾಲರಾದ ಮೇವಾ ಲಾಲ್ ಕಾಟಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನುಡಿ ಹಬ್ಬಕ್ಕೆ ಶುಭ ಕೋರಿದರು. ಈ ಸಂದರ್ಭ ಉದ್ಘಾಟಕರಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ಸಾವಿತ್ರಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶೃತಿ ಹೆಚ್.ಎಂ. ಸುಭಾಶ್ ಎಂ. ಭವ್ಯ ಮತ್ತು ಅಮೂಲ್ಯ ಅವರು ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳಿಂದ ನಾಡು ನುಡಿಗೆ ಸಮಭಂದಿಸಿದ ಭಾಷಣ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.











