ಮಡಿಕೇರಿ ನ.5 NEWS DESK : ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-27 ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ಹೆಮ್ಮೆಯಿಂದ ಗುರುತಿಸಿಕೊಂಡಾಗ ಮಾತ್ರ ಸಂವಿಧಾನಬದ್ಧ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಸಿಎನ್‍ಸಿ ವತಿಯಿಂದ ಬಿಟ್ಟಂಗಾಲದಲ್ಲಿ ನಡೆದ 18ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು 16ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು. ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದು ತಿಳಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಎಂದು ಒತ್ತಾಯಿಸಿದರು. ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಇಂದು ಜನಗಣತಿಯೂ ಸೇರಿದಂತೆ ರಾಜ್ಯ ದಾಖಲೆಗಳ ಎಲ್ಲಾ ಕಾಲಂಗಳಲ್ಲಿ ಈ ದೇಶದ ಬಹುಧರ್ಮ, ಪ್ರಬಲಧರ್ಮ ಮತ್ತು ಬಲಾಡ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟು ರಚಿಸಲ್ಪಟ್ಟಿರುವ ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಗೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ. 2021ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿದ ಪರಿಣಾಮ ಕೊಡವರ ಧ್ವನಿ ಸ್ವಯಂ ನಿರ್ಣಯದ ಹಕ್ಕು ಹಾಗೂ ಸಾಂವಿಧಾನಿಕ ಹಕ್ಕುಗಳ ಧ್ವನಿಯನ್ನು ಪ್ರತಿಪಾದಿಸಲು ಆಗಲಾರದಷ್ಟು ಕ್ಷೀಣಗೊಂಡಿತು ಎಂದು ಆರೋಪಿಸಿದರು.
ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳು ಮತ್ತು ಗಿರಿಕಂದರಗಳ ನಡುವೆ ಈ ಭೂಮಿಯ ಸೃಷ್ಟಿಯ ಲಾಗಯಿತಿನಿಂದಲೂ ಮತ್ತು ಮಾನವ ಕುಲ ಈ ಭೂಮಂಡಲದಲ್ಲಿ ಉತ್ಪತಿಯಾದ ಗಳಿಗೆಯಿಂದಲೂ ಕೊಡವಲ್ಯಾಂಡ್‌ನ ಆದಿಮಸಂಜಾತ ಏಕ ಬುಡಕಟ್ಟುಗಳಾದ ಕೊಡವರು ಆರ್ವಿಭವಿಸಿ, ಅರಳಿ ವಿಕಾಸವಾಗಿದ್ದಾರೆ. ಮೇಲಿನ ಮೂರು ಬುಡಕಟ್ಟುಗಳಂತೆ ಕೊಡವರು ಕೂಡ ಜಲದೇವತೆ-ಪ್ರಕೃತಿಯೊಂದಿಗೆ ಆಯನಿಮಿಸ್ಟಿಕ್ ಸಮುದಾಯವಾಗಿದೆ. ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ/ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು. ಆ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಜನಾಂಗೀಯ ವೈವಿದ್ಯತೆಯ ಮತ್ತು ಬೃಹತ್ ಸಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಪ್ರಜಾತಂತ್ರ ರಾಷ್ಟçವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಈ ಸಂಬಂಧ ಈಗಾಗಲೇ ಈ ರಾಷ್ಟçದ ನುರಿತ ಸಂವಿಧಾನ ತಜ್ಞರು ಮಾನವ ಶಾಸ್ತç ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಶಾಸ್ತç ವಿಜ್ಞಾನಿಗಳ ಜೊತೆ ಸಂಪರ್ಕ ಮತ್ತು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಇದೇ ಸಂದರ್ಭ ಎನ್.ಯು.ನಾಚಪ್ಪ ಹೇಳಿದರು. 2026 ಅಕ್ಟೋಬರ್ ನಿಂದ ಕೇಂದ್ರ ಸರಕಾರದ ಮೂಲಕ ನಡೆಯಲಿರುವ ಭಾರತ ದೇಶದ 16ನೇ ರಾಷ್ಟ್ರೀಯ ಜನಗಣತಿಯ ಸಂದರ್ಭ ಎಲ್ಲಾ ಕಾಲಂನಲ್ಲಿ “ಕೊಡವ” ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಹೊರ ರಾಷ್ಟçದ ಬಾಂಗ್ಲಾದೇಶಿ ರೋಹಿಂಗ್ಯಗಳಿಗೆ ನೆಲೆ ಕಲ್ಪಿಸಲು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಜನಗಣತಿ ಸಂದರ್ಭ ಮತಬ್ಯಾಂಕ್ ವೃದ್ಧಿ ಮಾಡಿಕೊಳ್ಳುವ ಮತ್ತು ದುಪ್ಪಟ್ಟು ಮತದಾರರ ಆಧಾರದಲ್ಲಿ ಲೋಕಸಭಾ ಸ್ಥಾನ ಬೇಕೆಂದು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತಭಿಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಕೊಡವರ ಭೂಮಿಗಳನ್ನು ಬಲವಂತವಾಗಿ ತೆರವುಗೊಳಿಸಿ ಅಲ್ಲಿ ಇವರಿಗೆಲ್ಲ ಭೂಮಿ, ವಸತಿ ನಿರ್ಮಿಸುವ ಒಳಸಂಚು ನಡೆಲಾಗುತ್ತಿದೆ. ಇದನ್ನು ವಿರೋಧಿಸಿದರೆ ಕೊಡಗಿನಲ್ಲಿ ಕಾರ್ಮಿಕರ ಕೊರತೆಯ ನೆಪವೊಡ್ಡಲಾಗುತ್ತಿದೆ. ಮುಂದೆ ಅಕ್ರಮ ವಲಸಿಗರಿಂದ ಕಾನೂನು ಉಲ್ಲಂಘನೆಯಾದರೆ ಸ್ಥಳೀಯರಿಗೆ ರಕ್ಷಣೆ ಇಲ್ಲದಾಗುತ್ತದೆ ಎಂದು ಎನ್.ಯು.ನಾಚಪ್ಪ ಕಳವಳ ವ್ಯಕ್ತಪಡಿಸಿದರು. ಸರಿ ಕಾರ್ಮಿಕರ ಕೊರತೆ ಇದ್ದರೆ ಟರ್ಕಿ ದೇಶದ ವಲಸಿಗ ಕಾರ್ಮಿಕರನ್ನು ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಎಂದು ಪರಿಗಣಿಸಲಾಗಿದೆ. ಮೋದಿ-ಶೇಖ್ ಹಸಿನಾ ಒಪ್ಪಂದ 2015ರಲ್ಲಿ ಡಾಕಾದಲ್ಲಿ ನಡೆದಾಗ ಈ ಗೆಸ್ಟ್ ವರ್ಕರ್ನೀತಿ ಮುನ್ನಲೆಗೆ ಬಂದಿದೆ. ಅದೇ ರೀತಿ ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರನ್ನು ಗೆಸ್ಟ್ ವರ್ಕರ್ ಪರ್ಮಿಟ್ ಮೇಲೆ ಆಹ್ವಾನಿಸಿ ಕೆಲಸ ಮುಗಿದ ನಂತರ ಅವರ ಊರುಗಳಿಗೆ, ದೇಶಗಳಿಗೆ ಹಿಂತಿರುಗಬೇಕು. ಪುನಃ ಕೃಷಿ ವರ್ಷ ಆರಂಭದಲ್ಲಿ ಅವರ ಗೆಸ್ಟ್ ವರ್ಕರ್ ಪರ್ಮಿಟ್ ನವೀಕರಿಸಬೇಕು. ಈ ನಿಯಮ ಜಾರಿಯಾಗಬೇಕು ಎಂದು ಸಲಹೆ ನೀಡಿದರು.
*ನ.10 ರಂದು ಹುದಿಕೇರಿಯಲ್ಲಿ ಮಾನವ ಸರಪಳಿ* 19ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನ.10 ರಂದು ಬೆಳಿಗ್ಗೆ 10.30 ಗಂಟೆಗೆ ಅಂಜಿಗೇರಿನಾಡ್‌ನ ಪುದಿಕೇರಿ (ಹುದಿಕೇರಿ) ಯಲ್ಲಿ ಮತ್ತು 20ನೇ ಮಾನವ ಸರಪಳಿ ನ.18 ರಂದು ಬೆಳಿಗ್ಗೆ 10.30 ಗಂಟೆಗೆ ಕುಟ್ಟದಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ ಮತ್ತು ಶ್ರೀಮಂಗಲದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಸರ್ವ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾಚೆಟ್ಟಿರ ಪಟ್ಟು, ಕಾಳೇಂಗಡ ರಮೇಶ್ ಕಾರ್ಯಪ್ಪ, ಮಾಚೆಟ್ಟಿರ ಚೋಟು ಕಾವೇರಪ್ಪ, ಕುಪ್ಪಂಡ ಗೋಪಾಲ್, ಮಾಚೆಟ್ಟಿರ ಸುನಿಲ್ ಕುಟ್ಟಪ್ಪ, ಮಾಚೆಟ್ಟಿರ ಸಚಿನ್ ಮಂದಣ್ಣ, ಮಾಚೆಟ್ಟಿರ ವಿಕ್ಕಿ ಚೆಂಗಪ್ಪ, ತಿತಿಮಾಡ ಸುಜಿ ದೇವಯ್ಯ, ಚೇಂದ್ರಿಮಾಡ ಪೂಣಚ್ಚ, ಕಳ್ಳಿರ ಉತ್ಸವ್ ನಾಚಪ್ಪ, ಚಂಬಂಡ ಜಾಗೃತ್ ಬಿದ್ದಪ್ಪ, ತೆಕ್ಕೇರ ಜೀವನ್ ನಾಣಯ್ಯ, ಪೊನ್ನಕಚ್ಚಿರ ಚರ್ಮಣ, ಮಾಚೆಟ್ಟಿರ ಚಂದ್ರು, ಬೊಪ್ಪಂಡ ಅಶೋಕ್, ಕಂಜಿತಂಡ ದಿಲನ್, ಪುಚ್ಚಿಮಂಡ ದೇವಯ್ಯ, ಚೊಟ್ಟೆಮಾಡ ಮುತ್ತಪ್ಪ, ತಿತಿಮಾಡ ಶಾನ್ ಬಿದ್ದಪ, ಕಳಕಂಡ ಚೇತನ್, ಅಜ್ಜಿನಿಕಂಡ ನವೀನ್, ಪಾಲೇಕಂಡ ಮುತ್ತಣ್ಣ, ಕಾಂಡೇರ ಸುರೇಶ್, ಅರೆಯಡ ಗಿರೀಶ್ ಹಾಗೂ ಚಂಬಂಡ ಜನತ್ ಪಾಲ್ಗೊಂಡು ಸಂವಿಧಾನಬದ್ಧವಾದ ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.











