ಮಡಿಕೇರಿ NEWS DESK ನ.9 : ಚೇರಳ ಗೌಡ ಸಮಾಜದ 17ನೇ ಮಹಾಸಭೆ ಸಮಾಜದ ಅಧ್ಯಕ್ಷ ಐಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೌಡ ಸಮಾಜದ ನೂತನ ಕಟ್ಟಡವನ್ನು 2026ರ ಫೆಬ್ರವರಿಯಲ್ಲಿ ಉದ್ಘಾಟಿಸಲು ಸಭೆ ನಿರ್ಧರಿಸಿತು. ನೂತನ ಕಟ್ಟಡದ ಪ್ರಗತಿಯ ಕುರಿತು ಮಾತನಾಡಿದ ಐಯಂಡ್ರ ರಾಘವಯ್ಯ ಅವರು ಕೇವಲ 22 ಕುಟುಂಬಗಳಿದ್ದ ಸಣ್ಣ ಹಳ್ಳಿಯಲ್ಲಿ ಒಟ್ಟು ಒಂದೂವರೆ ಕೋಟಿ ರೂ. ವೆಚ್ಚದ ಗೌಡ ಸಮಾಜದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಒಂದು ಕಾಲು ಕೋಟಿ ರೂ. ವೆಚ್ಚದಲ್ಲಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 27 ಲಕ್ಷ ರೂ.ಗಳ ಕೊನೆಯ ಹಂತದ ಕಾಮಗಾರಿ ಬಾಕಿ ಇದ್ದಾಗ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಹಾಗೂ ಆಡಳಿತ ಮಂಡಳಿಯವರು ದಾನಿಗಳ ಸಹಕಾರ ಪಡೆದು 17 ಲಕ್ಷ ರೂ.ಗಳ ಕಾಮಗಾರಿಯನ್ನು ಪೂರ್ಣಗೊಳಿಸಿಕೊಟ್ಟಿದ್ದಾರೆ. ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ ಎಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು. ಉಳಿದ 10ಲಕ್ಷ ರೂ.ಗಳ ಕಾಮಗಾರಿಯನ್ನು ಚೇರಳ ಗೌಡ ಸಮಾಜ ಪೂರ್ಣಗೊಳಿಸಲಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು. ಸಮಾಜದ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಮೊಬೈಲ್ ಫೋನ್ ಗಳಿಂದ ದೂರ ಉಳಿದು ಶಿಕ್ಷಣಕ್ಕೆ ಒತ್ತು ನೀಡಬೇಕು. ಮೊಬೈಲ್ ತಲೆ ತಗ್ಗಿಸುವಂತೆ ಮಾಡಿದರೆ, ಪುಸ್ತಕಗಳು ಇನ್ನೆಂದಿಗೂ ತಲೆ ತಗ್ಗಿಸದಂತೆ ಮಾಡುತ್ತವೆ ಎಂದು ಐಯಂಡ್ರ ರಾಘವಯ್ಯ ಕಿವಿಮಾತು ಹೇಳಿದರು. ಸಮಾಜದ ಕಾರ್ಯದರ್ಶಿ ಆಜೀರ ಧನಂಜಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿವಾಹವಾಗಿ ಹೋದ ಸಮಾಜದ ಹೆಣ್ಣು ಮಕ್ಕಳು ಹಾಗೂ ಉದ್ಯೋಗದಲ್ಲಿರುವ ಮಕ್ಕಳು ನೂತನ ಕಟ್ಟಡ ನಿರ್ಮಾಣಕ್ಕೆ ನೀಡಿದ ಆರ್ಥಿಕ ಸಹಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಹೊಸಮನೆ ಟಿ.ಪೂವಯ್ಯ ಉಪಸ್ಥಿತರಿದ್ದರು. ಆಜೀರ ಧನಂಜಯ ಅವರು 2024-25ನೇ ಸಾಲಿನ ವರದಿಯನ್ನು ಮತ್ತು ಉಪ ಖಜಾಂಚಿ ಪೇರಿಯನ ಉದಯ ಕುಮಾರ್ ಅವರು ಲೆಕ್ಕಪತ್ರವನ್ನು ಮಂಡಿಸಿದರು. ಖಜಾಂಚಿ ಮುಕ್ಕಾಟಿ ಪಳಂಗಪ್ಪ ಸ್ವಾಗತಿಸಿ, ಆಜೀರ ಧನಂಜಯ ವಂದಿಸಿದರು, ಪೇರಿಯನ ಪ್ರಣವಿ ಪ್ರಾರ್ಥಿಸಿದರು.











