ಮಡಿಕೇರಿ ನ.10 NEWS DESK : ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ನ.13 ರಂದು ಪೊನ್ನಂಪೇಟೆಯಿಂದ ಗೋಣಿಕೊಪ್ಪದ ವರೆಗೆ ಏಕತಾ ಪಾದಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಸರಕಾರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಮೂಲಕ ‘ವಿಕಸಿತ ಭಾರತ್ ಪಾದಯಾತ್ರೆ’ಯನ್ನು ರಾಷ್ಟ್ರವ್ಯಾಪಿ ಆಯಾ ಕ್ಷೇತ್ರದ ಸಂಸದರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಇದು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಕಾರ್ಯಕ್ರಮವಾಗಿದೆ ಎಂದು ವಿವರಿಸಿದ್ದಾರೆ. ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ವಿರಾಜಪೇಟೆ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಮದಲ್ಲಿ ಪೊನ್ನಂಪೇಟೆಯಿಂದ ಬೆಳಿಗ್ಗೆ 9.30 ಗಂಟೆಗೆ ಏಕತಾ ಪಾದಯಾತ್ರೆ ಆರಂಭಗೊಂಡು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನವರೆಗೆ ಸಾಗಲಿದೆ. ಪಾದಯಾತ್ರೆಯಲ್ಲಿ ಸಂಸದರು, ಶಾಸಕದ್ವಯರು, ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಜಿ ಶಾಸಕರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಎನ್ಸಿಸಿ, ಎನ್ಎಸ್ಎಸ್ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವ ಜನತೆ, ಸಾರ್ವಜನಿಕರು ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯಲ್ಲಿ ಕೊಡಗಿನ ಸಾಂಸ್ಕೃತಿಕ ತಂಡಗಳು ಗಮನ ಸೆಳೆಯಲಿವೆ. ನಂತರ 12 ಗಂಟೆಗೆ ಗೋಣಿಕೊಪ್ಪದ ಪರಿಮಳ ವಿಹಾರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು, ಕೊಡಗಿನ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸುಕುಮಾರ್ ಮನವಿ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಭಾರತದ ಯುವ ಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಭಾವನೆಯನ್ನು ಎಚ್ಚರಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಈ ತಿಂಗಳ 25ರ ವರೆಗೆ ನಡೆಯಲಿದೆ. ಏಕತಾ ಪಾದಯಾತ್ರೆ ಅಭಿಯಾನದ ಮೂಲಕ ಯುವ ಜನರು ಏಕ ಭಾರತ್ ಆತ್ಮ ನಿರ್ಭರ್ ಭಾರತದ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಅಲ್ಲದೆ ನಶಾಮುಕ್ತ ಭಾರತ್ ಪ್ರತಿಜ್ಞೆಯನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.










