ಮಡಿಕೇರಿ ನ.10 NEWS DESK : ದಕ್ಷಿಣ ಕೊಡಗಿನ ಕ್ರಿಶ್ಚಿಯನ್ ಅಸೋಸಿಯೇಷನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗೋಣಿಕೊಪ್ಪದಲ್ಲಿರುವ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶಾಸಕರು ನೀಡಿದ ಅದ್ವಿತೀಯ ಕೊಡುಗೆಯನ್ನು ಸ್ಮರಿಸಿ ಅಸೋಸಿಯೇಷನ್ ನ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಬಹು ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಸದಾ ಶಾಂತಿ, ಸೌಹಾರ್ದತೆಯನ್ನು ಬಯಸುವ ಸಮುದಾಯವು ಮತ್ತಷ್ಟು ಏಳಿಗೆಯನ್ನು ಕಾಣುವಂತಾಗಬೇಕೆಂದು ಆಶಿಸಿದರು. ತನ್ನ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ತನ್ನ ವೈಯುಕ್ತಿಕ ನಿಧಿಯಿಂದ ಮಾತ್ರವಲ್ಲದೆ ಸರಕಾರದ ವಿಶೇಷ ಅನುದಾನಗಳ ಮೂಲಕ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಸಮುದಾಯದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ನೀಡಿದ್ದೇನೆ. ಮಾತ್ರವಲ್ಲದೆ ಇನ್ನು ಮುಂದೆಯೂ ಸಹ ಸಮುದಾಯದ ಉನ್ನತಿಗಾಗಿ ಯಾವುದೇ ರೀತಿಯ ಸಹಾಯ ಬಯಸಿದರೆ ಖಂಡಿತ ತನ್ನನ್ನು ಸಂಪರ್ಕಿಸಬೇಕಾಗಿ ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು. ಶಾಸಕರೊಂದಿಗೆ ಇನ್ನಿತರ ಗಣ್ಯರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ಎ.ಜೆ.ಬಾಬು, ಧರ್ಮ ಗುರುಗಳು, ಕನ್ಯಾ ಶ್ರೀ ಹಾಗೂ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಹಾಗೂ ಸಮುದಾಯ ಬಾಂಧವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.











