ಮಡಿಕೇರಿ ನ.12 NEWS DESK : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಇದೇ ನ.14 ರಿಂದ 20ರವರೆಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದು ಯೂನಿಯನ್ ಜಿಲ್ಲಾಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನ.14 ರಂದು ನಡೆಯಲಿದ್ದು, ಸಮಾರೋಪ ಸಮಾರಂಭ ನ.20 ರಂದು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ಉನ್ನತಿ ಭವನ’ದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು. *ಪ್ರಶಸ್ತಿ ಪ್ರದಾನ*
ಮಡಿಕೇರಿಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿಯನ್ನು ಪೊನ್ನಂಪೇಟೆಯ ಹಿರಿಯ ಸಹಕಾರಿಗಳಾದ ಚಿರಿಯಂಡ ಕೆ.ಉತ್ತಪ್ಪ ಅವರಿಗೆ ಪ್ರದಾನ ಮಾಡಲಾಗುತ್ತದೆ. ‘ಶ್ರೇಷ್ಠ ಸಹಕಾರಿ ಪ್ರಶಸಿ’್ತಯನ್ನು ಈ ಬಾರಿ ಸೋಮವಾರಪೇಟೆ ತಾಲ್ಲೂಕಿನ ಶುಂಠಿ ಗ್ರಾಮದ ಎಚ್.ಎಸ್.ಮುದ್ದಪ್ಪ, ಮಡಿಕೇರಿ ತಾಲ್ಲೂಕಿನ ಅರುವತ್ತೋಕ್ಲು ಗ್ರಾಮದ ತಳೂರು ಎ.ಕಿಶೋರ್ ಕುಮಾರ್, ಶನಿವಾರಸಂತೆಯ ದೇವಾಂಬಿಕ ಮಹೇಶ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಇದರೊಂದಿಗೆ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿಯನ್ನು ಆಲೆಮಾಡ ಕಾವೇರಮ್ಮ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದರು. *ಸಪ್ತಾಹದ ಕಾರ್ಯಕ್ರಮಗಳು* ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಧ್ಯೇಯ ವಾಕ್ಯದೊಂದಿಗೆ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನ.14 ರಂದು ನಡೆಯುವ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದೊಂದಿಗೆ, ವಸ್ತು ಪ್ರದರ್ಶನ, ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ನ.15 ರಂದು ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ನ.16 ರಂದು ಸುಂಟಿಕೊಪ್ಪ ಸಹಕಾರ ಸಂಘದಲ್ಲಿ, ನ.17ರಂದು ಸೋಮವಾರಪೇಟೆ ಸಹಕಾರ ಸಂಘದಲ್ಲಿ, ನ.18ರಂದು ಕಾನೂರು ಸಹಕಾರ ಸಂಘದಲ್ಲಿ, ನ.19 ರಂದು ದೇವಣಗೇರಿ ಸಹಕಾರ ಸಮಘದಲ್ಲಿ ಸಪ್ತಾಹದ ಕಾರ್ಯಕ್ರಮಗಳು ನಡೆಯಲಿದ್ದು, ನ.20ರಂದು ಮಡಿಕೇರಿಯಲ್ಲಿ ಸಮಾರೋಪ ನಡೆಯಲಿದೆಯೆಂದು ತಿಳಿಸಿದರು. *ತಲ್ತರೆಶೆಟ್ಟಳ್ಳಿಯಲ್ಲಿ ರಾಜ್ಯದ ದ್ವಿತೀಯ ಸಹಕಾರ ಸಂಘ* ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 1905 ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ದಿವಂಗತ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರಿಂದ 1905ರ ಮೇ 8ರಂದು ಸಹಕಾರ ಕಾಯ್ದೆಯನ್ವಯ ನೋಂದಣಿಗೊಂಡು ಪ್ರಥಮ ಸಹಕಾರ ಸಂಘವು ಸ್ಥಾಪಿಸಲ್ಪಟ್ಟಿತು. ನಂತರ ಅದೇ ತಿಂಗಳ ಅಂದರೆ 1905ರ ಮೇ 22ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಕುರಾದ ಗೌಡ್ನಮನೆ ಪಿ. ದೊಡ್ಡಯ್ಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಪ್ರಥಮ ಸಹಕಾರ ಸಂಘವು ಸ್ಥಾಪಿಸಲ್ಪಟ್ಟಿತೆಂದು ರಾಬಿನ್ ದೇವಯ್ಯ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶ್ಯಾಮಲಾ, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಟಿ.ಸುಬ್ಬಯ್ಯ, ವಿ.ಸಿ.ಅಮೃತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.











