ಮಡಿಕೇರಿ NEWS DESK ನ.12 : ಹಾರಂಗಿ ಹಿನ್ನೀರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಕುಶಾಲನಗರ ಸಮೀಪದ ಹೇರೂರು ಗ್ರಾಮದಲ್ಲಿ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ದುಬಾರೆ ರ‍್ಯಾಫ್ಟರ್‌ಗಳು ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಿದರು. ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹೆಬ್ಬೆಟ್ಟಗೇರಿ ಗ್ರಾಮ ನಿವಾಸಿ ಪಾಂಡೀರ ಪೂವಯ್ಯ ಎಂಬುವವರ ಪುತ್ರ ಚಂಗಪ್ಪ(17) ಹಾಗೂ ಕಾಲೂರು ಗ್ರಾಮದ ನಿವಾಸಿ ಚನ್ನಪಂಡ ತಮ್ಮಯ್ಯ ಎಂಬುವವರ ಪುತ್ರ ತರುಣ್ ತಿಮ್ಮಯ್ಯ(17) ಎಂಬುವವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಸಂಜೆಯವರೆಗೆ ಶೋಧ ಕಾರ್ಯ ನಡೆಯಿತು. ರಕ್ಷಣಾ ತಂಡ ಚಂಗಪ್ಪ ಎಂಬಾತನ ಮೃತದೇಹವನ್ನು ಹೊರ ತೆಗೆಯುವಲ್ಲಿ ಸಫಲವಾಗಿದೆ.











