ಮಡಿಕೇರಿ ನ.13 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನ.26ರಂದು ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಿಗ್ಗೆ 10.30 ಗಂಟೆಗೆ “ಭಾರತೀಯ ಸಂವಿಧಾನ ದಿನ”ದೊಂದಿಗೆ 35ನೇ “ಕೊಡವ ನ್ಯಾಷನಲ್ ಡೇ” ಆಚರಿಸಲಾಗುತ್ತದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ಆದಿಮಸಂಜಾತ ಏಕ ಜನಾಂಗೀಯ ಅನಿಮಿಸ್ಟಿಕ್ ಕೊಡವರ ಆಕಾಂಕ್ಷೆಗಳನ್ನು ಸಾಧಿಸುವತ್ತ ಶಾಂತಿಯುತ ಹೋರಾಟಗಳನ್ನು ಅವಿರತವಾಗಿ ನಡೆಸಿಕೊಂಡು ಬಂದಿರುವ ಸಿಎನ್‍ಸಿ ಸಂಘಟನೆ, “ಕೊಡವ ನ್ಯಾಷನಲ್ ಡೇ”ಯಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವ-ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು, ಆದಿಮಸಂಜಾತ ಹಕ್ಕುಗಳ ಅಡಿಯಲ್ಲಿ ಕೊಡವರಿಗೆ ವಿಶ್ವಸಂಸ್ಥೆಯ ಮಾನ್ಯತೆ, ಎಸ್‍ಟಿ ವರ್ಗೀಕರಣ, ಕೊಡವ ಧಾರ್ಮಿಕ ಸಂಸ್ಕಾರ-ಗನ್-ತೋಕ್‍ಗೆ ಸಾಂವಿಧಾನಿಕ ಖಾತ್ರಿಗಳು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಬೇಕು, ಜೀವಜಲ ಕಾವೇರಿ ಜನ್ಮಸ್ಥಳ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥ ಕ್ಷೇತ್ರವೆಂದು ಪರಿಗಣಿಸಬೇಕು, ಕೊಡವಲ್ಯಾಂಡ್‍ನಲ್ಲಿ “ಜೀವನದಿ ಕಾವೇರಿ” ಗೆ ಜೀವ ಘಟಕದ ಸ್ಥಾನಮಾನ ನೀಡಬೇಕು, ಕಾವೇರಿ ನೀರಿನ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು, ಕೊಡವ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸಲು ದೇವಟ್ ಪರಂಬು, ಮಡಿಕೇರಿ ಕೋಟೆ, ನಾಲ್‍ನಾಡ್ ಅರಮನೆ ಸೇರಿದಂತೆ ಸ್ಮಾರಕಗಳನ್ನು ಸ್ಥಾಪಿಸಬೇಕು, ಜನಸಂಖ್ಯಾ ಬದಲಾವಣೆಯನ್ನು ತಡೆಗಟ್ಟಲು ಮತ್ತು ಸಮುದಾಯದ ಆಸ್ತಿಗಳನ್ನು ರಕ್ಷಿಸಲು ಇನ್ನರ್ ಲೈನ್ ಪರ್ಮಿಟ್ (ಐಎಲ್‍ಪಿ) ಅನುಷ್ಠಾನಗೊಳಿಸಬೇಕು, ಹೊಸ ಸಂಸತ್ತಿನ ಕೇಂದ್ರ ದೃಷ್ಟಿಕೋನದಲ್ಲಿ ಸಿಕ್ಕಿಂನ “ಸಂಘ” ಮತಕ್ಷೇತ್ರ ಮಾದರಿಯಲ್ಲಿ ಕೊಡವ ಪ್ರಾತಿನಿಧ್ಯವನ್ನು ಖಚಿತಪಡಿಸಬೇಕು, ವಿದೇಶಿ ಆಡಳಿತಗಾರರಿಂದ ಮುಟ್ಟುಗೋಲು ಹಾಕಿಕೊಂಡ ಅಥವಾ ವಶಪಡಿಸಿಕೊಂಡ ಪೂರ್ವಜರ ಭೂಮಿಯನ್ನು ಇನ್ ಇಂಟರ್ ನ್ಯಾಷನಲ್ ಲಾ ಪ್ರಕಾರ ಮರುಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಈ ಬೇಡಿಕೆಗಳು ಕೊಡವ ಸಂಸ್ಕೃತಿ, ಗುರುತು ಮತ್ತು ಹಕ್ಕುಗಳನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟಿರುವ ಅವರು, 35ನೇ “ಕೊಡವ ನ್ಯಾಷನಲ್ ಡೇ”ಯಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.











