
ಮಡಿಕೇರಿ ನ.14 NEWS DESK : ದೇಶದ ಏಕತಾ ಪುರುಷ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮದಿನದ ಪ್ರಯುಕ್ತ ‘ಏಕತಾ ನಡಿಗೆ’ ಪೆÇನ್ನಂಪೇಟೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ಬಸ್ ನಿಲ್ದಾಣದಿಂದ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದವರೆಗೆ ಯದುವೀರ್ ಒಡೆಯರ್ ಅವರ ಮುಂದಾಳತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಸಾಗಿ ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಸಮಾವೇಶಗೊಂಡರು. ಸಭಾ ಕಾರ್ಯಕ್ರಮಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅನೇಕ ಒಪ್ಪಂದಗಳ ಮೂಲಕ ಭಾರತದ ಏಕತೆಗಾಗಿ ಕೊನೆ ಉಸಿರಿನವರೆಗೂ ಶ್ರಮಿಸಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮಲು ಇವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಮೈಸೂರು ಸಂಸ್ಥಾನದೊಂದಿಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಸಂಬಂಧವನ್ನು ಸಂಸದರು ವಿವರಿಸಿದರು.
ಸರ್ದಾರ್ ವಲ್ಲಭಬಾಯಿ ಪಟೇಲರು ಉಪ ಪ್ರಧಾನಿಯಾಗಿದ್ದ ಸಂದರ್ಭ ಅಂದಿನ ಮಹರಾಜಾ ಜಯ ಚಾಮರಾಜ ಒಡೆಯರ್ ಅವರು ಪಟೇಲ್ ಅವರಿಗೆ ಸಂಚರಿಸಲು ವಿಮಾನ ನೀಡಿದ ಕುರಿತು ಸ್ಮರಿಸಿದರು. ಇಂದಿಗೂ ಆ ವಿಮಾನವನ್ನು ಹುಡುಕುತ್ತಿದ್ದು ಅದನ್ನು ಹಿಂಪಡೆದು ಸಂರಕ್ಷಿಸುವ ಉದ್ದೇಶ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು. ಮುಖ್ಯವಾಗಿ ಮುಂದಿನ ಪೀಳಿಗೆಗೆ ದೇಶದ ಬಗ್ಗೆ ಗೌರವ, ಏಕತಾ ಮನೋಭಾವ ಬೆಳೆಸುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಬ್ಬಡಿ ಕ್ರೀಡಾ ಕೂಟ ಹಾಗೂ ಗಣೇಶ ಚತುರ್ಥಿಯನ್ನು ಆಚರಿಸುವುದರ ಮೂಲಕ ಎಲ್ಲರನ್ನು ಒಗ್ಗೂಡಿಸಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವತಂತ್ರ ಸಿಕ್ಕಿದ ನಂತರ ಭಾರತದ ಉಪ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅವರಿಗೆ ಗೃಹ ಖಾತೆ ನೀಡಿದಾಗ ಸಮರ್ಥವಾಗಿ ನಿಭಾಯಿಸಿ, ಎಲ್ಲ ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ್ದರು. ಭಾರತವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದ ಇವರನ್ನು ಸರ್ದಾರ್ ಪಟ್ಟ ಹಾಗೂ ಭಾರತ ರತ್ನ ಬಿರುದು ನೀಡಿ ಗೌರವಿಸಲಾಯಿತು ಎಂದು ಸ್ಮರಿಸಿದರು. ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಭಾರತ ದೇಶ ಸ್ವಾವಲಂಬಿಯಾಗಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದಲ್ಲಿಯೇ ಆರ್ಥಿಕತೆಯಲ್ಲಿ 4ನೇ ಸ್ಥಾನಕ್ಕೆ ಏರುವಂತೆ ಮಾಡಿದ್ದಾರೆ. ಇತರೆ ದೇಶಗಳು ನಮ್ಮ ಸ್ವದೇಶಿ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸಿ ಆರ್ಥಿಕತೆಯನ್ನು ಕುಗ್ಗಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ದೇಶದ ಜನರು ಸ್ವದೇಶಿ ವಸ್ತುಗಳನ್ನು ಬಳಸಿ ಭಾರತದ ಪ್ರಗತಿಗೆ ಸಹಕರಿಸಬೇಕು. ಭಾರತ ದೇಶ ಸ್ವಾವಲಂಬಿಯಾಗಬೇಕಾದರೆ ಜನರು ಮೊದಲು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಆಗಬೇಕೆಂದರು. ಗೋಣಿಕೊಪ್ಪ ಕಾವೇರಿ ಕಾಲೇಜ್ ವಿದ್ಯಾರ್ಥಿಗಳಿಂದ ಕೊಡಗಿನ ಸಾಂಪ್ರದಾಯಿಕ ನೃತ್ಯಗಳಾದ ಕತ್ತಿಯಾಟ್, ಕೋಲಾಟ್ ಹಾಗೂ ಉಮ್ಮತ್ತಾಟ್ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಏಕತಾ ನಡಿಗೆಯಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಾಂಸನಾ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಮಿಸ್ಟರ್ ಇಂಡಿಯಾ ಯೂನಿವರ್ಸ್ 2025ಕ್ಕೆ ಆಯ್ಕೆಯಾದ ಕರಿನೆರವಂಡ ಬಿಷನ್ ಮಾದಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜೀ ಶಾಸಕ ಕೆ.ಜಿ. ಬೋಪಯ್ಯ, ಮೈ ಭರತ್ ಕೊಡಗು ಜಿಲ್ಲಾ ಯುವ ಒಕ್ಕೂಟ ಅಧಿಕಾರಿ ಕೆ.ಟಿ. ಉಲ್ಲಾಸ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಘದ ಅಧ್ಯಕ್ಷ ರಾಬಿನ್ ದೇವಯ್ಯ, ಕೊಡಗು ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್, ಕೊಡಗು ಯುವ ಒಕ್ಕೂಟ ಸಂಚಾಲಕ ವಿ.ಕೆ ಲೋಕೇಶ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಗೋಣಿಕೊಪ್ಪ ಕಾವೇರಿ ಕಾಲೇಜು ಕಾರ್ಯದರ್ಶಿ ಕೆ.ಸಿ ಬೋಪಣ್ಣ ಹಾಜರಿದ್ದರು.









