ಬೆಂಗಳೂರು ನ.14 NEWS DESK : ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಇಂದು(ನ.14) ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ಭಾರತದ ಪರಿಸರ ಇತಿಹಾಸದಲ್ಲಿ ‘ಸಾಲುಮರದ ತಿಮ್ಮಕ್ಕ’ ಎಂಬ ಹೆಸರು ಎಂದಿಗೂ ಅಜರಾಮರ. 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್ ಗ್ರಾಮದ ಚಿಕ್ಕಯ್ಯ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಒಬ್ಬ ಕೂಲಿ ಕಾರ್ಮಿಕೆಯಾಗಿ ತಮ್ಮ ಜೀವನವನ್ನು ಆರಂಭಿಸಿದ ಈ ಮಹಾತಾಯಿಗೆ ಮಕ್ಕಳಿರಲಿಲ್ಲ. ಹಾಗಾಗಿ, ಆ ನೋವಿನಿಂದ ಹೊರಬರಲು ಮತ್ತು ಭೂಮಿಗೆ ಪ್ರಕೃತಿಯ ಕೊಡುಗೆ ನೀಡಲು, ಸುಮಾರು ನಾಲ್ಕು ಕಿ.ಮೀ. ಉದ್ದದ ರಸ್ತೆಯುದ್ದಕ್ಕೂ 400ಕ್ಕೂ ಹೆಚ್ಚು ಆಲದ ಮರಗಳನ್ನು (Banyan Trees) ನೆಟ್ಟು, ಅವಕ್ಕೆ ನೀರು ಹಾಕಿ ಪೋಷಿಸಿದರು. ಗಿಡಮರಗಳನ್ನೇ ಮಕ್ಕಳಂತೆ ಸಾಕಿದರು. ಅದೇ ಕಾರಣಕ್ಕೆ, ಅವರಿಗೆ ‘ಸಾಲುಮರದ’ (Row of Trees) ಎಂಬ ಬಿರುದು ಬಂತು. 2019ರಲ್ಲಿ ಪದ್ಮಶ್ರೀ ಲಭಿಸಿತ್ತು. ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರಿಂದ ಸಂತಾಪ ವ್ಯಕ್ತವಾಗಿದೆ.











