ಮಡಿಕೇರಿ ನ.14 NEWS DESK : 2025-26ನೇ ಸಾಲಿನ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಪರಸ್ಪರ ಕಲಿಕಾ ಕ್ಷೇತ್ರ ಭೇಟಿ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದುಕೊಂಡ ಗ್ರಾಮ ಪಂಚಾಯಿತಿಗಳಾದ ಮಡಿಕೇರಿ ತಾಲ್ಲೂಕಿನ ಹೊದ್ದೂರು, ಕುಶಾಲನಗರದ ನಂಜರಾಯಪಟ್ಟಣ, ವಿರಾಜಪೇಟೆಯ ಹಾಲುಗುಂದ, ಪೊನ್ನಂಪೇಟೆಯ ಮಾಯಮುಡಿ, ಸೋಮವಾರಪೇಟೆ ದುಂಡಳ್ಳಿ ಗ್ರಾ.ಪಂಗಳನ್ನು ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಮಾಡಬಾಳ, ಶಹಾಬಾದ ತಾಲ್ಲೂಕಿನ ಭಂಕೂರ ಹಾಗೂ ಕಲ್ಬುರ್ಗಿ ತಾಲ್ಲೂಕಿನ ಫಿರೋಜಬಾದ್ ಗ್ರಾಮ ಪಂಚಾಯಿತಿಗಳಿಗೆ ನವೆಂಬರ್ ತಿಂಗಳ 5, 6, 7ನೇ ದಿನಾಂಕಗಳಂದು ಕ್ಷೇತ್ರ ಭೇಟಿ ನಿಗದಿಯಾಗಿತ್ತು. ನಮ್ಮ ಕಾರ್ಯಕ್ಷೇತ್ರದಲ್ಲಿ ಮಾಡಿದ ಉತ್ತಮ ಕೆಲಸಗಳಿಂದಾಗಿ ಕೆಲವೊಂದು ಸದಾವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ನಮ್ಮೆಲ್ಲರ ಕಲ್ಬುರ್ಗಿ ಕಲಿಕಾ ಕ್ಷೇತ್ರ ಭೇಟಿ ಸಾಕ್ಷಿಯಾಯಿತು. ನಮ್ಮ ತಂಡದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ 5 ಜನದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಗಳ ಒಟ್ಟು 25 ಜನರ ತಂಡವಿತ್ತು. ಸುಮಾರು 700 ಕಿ.ಮೀ ದೂರದ ತ್ರಾಸದಾಯಕ ಪಯಣವಾದ್ದರಿಂದ ನಮಗೆ ರೈಲು ಪಯಣವೇ ಸೂಕ್ತವೆಂದು ಸಕಾಲಕ್ಕೆ ತಲುಪುವ ಉದ್ದೇಶದಿಂದ ಒಂದು ದಿನ ಮುಂಚಿತವಾಗಿ ಮೈಸೂರಿನಿಂದ ಟ್ರೈನ್ ಏರಿದ್ದೆವು. ಕೊಡಗಿನವರಿಗೆ ಕಲ್ಬುರ್ಗಿಯಂತಹ ದೂರದ ಬಿಸಿಲೂರಿಗೆ ಪಯಣಿಸುವ ಸಂದರ್ಭ ಸಿಗುವುದಿಲ್ಲ ಎಂಬ ಅರಿವಿರುವುದರಿಂದ ನಮಗಿಂತ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಭಿನ್ನವಿರುವ ಊರ ಕಡೆಗಿನ ಪಯಣ ಕುತೂಹಲದೊಂದಿಗೆ ರೋಮಾಂಚನವನ್ನು ಉಂಟುಮಾಡಿದ್ದು ಸತ್ಯ. ಹಾಗೆಯೇ ಈ ಹಿಂದೆ ಕೊಡಗಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಭಂವರ್ ಸಿಂಗ್ ಮೀನಾರವರು ಕಲ್ಬುರ್ಗಿಯ ಪ್ರಸ್ತುತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವುದು ಹಾಗೂ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆಯವರ ಊರೆಂಬ ಭಾವಾನಾತ್ಮಕ ಸಂಬಂಧವೊಂದು ನಮ್ಮ ಮನಸ್ಸನ್ನು ಚೇತೋಹಾರಿಯಾಗಿಸಿದ್ದು ಸುಳ್ಳಲ್ಲ. ನಾವು ಕಲ್ಬುರ್ಗಿಯನ್ನು ತಲುಪಿದ್ದು 5ನೇ ತಾರೀಕಿನ ಮುಂಜಾನೆ ನಾಲ್ಕು ಗಂಟೆಗೆ. ನಮ್ಮ ಜಿಲ್ಲಾ ಪಂಚಾಯಿತಿಯ ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಅಬ್ದುಲ್ ನಬಿ ರವರು ಒಂದು ದಿನ ಮುಂಚಿತವಾಗಿ ಹೋಗಿ ನಮ್ಮನ್ನು ರೈಲ್ವೆ ಸ್ಟೆಷನ್ ನಿಂದ ಕರೆದುಕೊಂಡು ಹೋಗಿ SIRD ಸಂಸ್ಥೆಯಲ್ಲಿ ಉಳಿಯುವ, ಮೂರು ದಿನದ ಊಟ ತಿಂಡಿಗಳ ಜತೆಗೆ ಕ್ಷೇತ್ರ ಭೇಟಿ, ಪ್ರವಾಸಿ ಸ್ಥಳಗಳ ಭೇಟಿಯಿಂದ ಹಿಡಿದು ಕೊನೆಯ ದಿನ ರೈಲು ಹತ್ತಿಸುವ ತನಕದ ವ್ಯವಸ್ಥೆಯನ್ನು ಮಾಡಿದ್ದರು. ಈ ವ್ಯವಸ್ಥೆಗಳು ಅತ್ಯುತ್ತಮವಾಗಿ ನೆರವೇರಿದ್ದು ಮೂರುದಿನಗಳು ಜತೆ ನಿಂತು ನಮ್ಮ ಬೇಕುಬೇಡಗಳನ್ನು ಅರ್ಥಮಾಡಿಕೊಂಡು ಪ್ರೀತಿ, ತಾಳ್ಮೆಯಿಂದ ಸೌಕರ್ಯ ಒದಗಿಸಿದ ಕಲಬುರ್ಗಿಯ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸೈಯದ್ ಪಟೇಲ್ ರವರು. ಅವರ ಆದರದ ಆತಿಥ್ಯಕ್ಕೆ ನಮ್ಮ ತಂಡ ಅಭಾರಿ. ಮೂರು ದಿನದ ಕ್ಷೇತ್ರ ಭೇಟಿಯಲ್ಲಿ ಬೆಳಗ್ಗಿನ ಉಪಹಾರ ಹಾಗೂ ರಾತ್ರಿಯ ಊಟದ ಸ್ಥಳೀಯ ಸಾಂಪ್ರದಾಯಿಕ ರುಚಿಯಾದ ಸುಸ್ಲಾ ಬಜ್ಜಿ, ಶ್ಯಾವಿಗೆ ಉಪ್ಪಿಟ್ಟು, ಕೇಸರಿ ಬಾತ್, ಜೋಳದ ಕಡಕ್ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಶೇಂಗಾ ಹೋಳಿಗೆ, ಒಬ್ಬಟ್ಟು, ಎಣ್ಣೆಗಾಯಿಯನ್ನು ನಮಗೆ ಉಣಬಡಿಸಿದ್ದು ಸರ್ಕಾರದ ಯೋಜನೆಯ ಮೂಲಕ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಂದ ಯಶಸ್ವಿಯಾಗಿ ನಡೆಯುತ್ತಿರುವ ಅಕ್ಕ ಕೆಫೆಯವರು. ಸ್ವ ಉದ್ಯೋಗದಿಂದ ಮಹಿಳಾ ಸಬಲೀಕರಣಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಸಿಗಲಾರದು. ಸದಾ ಹಸಿರಿಂದ ಕಂಗೊಳಿಸುವ ಬೆಟ್ಟ ಗುಡ್ಡಗಳಿಂದ ಕೂಡಿದ ತಂಪಿನ ವಾತಾವರಣದ ಕೊಡಗು ಜಿಲ್ಲೆಯವರಾದ ನಮಗೆ ಕಿ.ಮೀಗಟ್ಟಲೆ ಉದ್ದಕ್ಕೂ ಕಣ್ಣು ಹಾಯಿಸಿದರೂ ಕಾಣುವ ಬಯಲು ಪ್ರದೇಶದ ಕಲ್ಬುರ್ಗಿಯಲ್ಲಿ ನಮ್ಮ ಕಣ್ಣುಗಳ ದೃಷ್ಠಿ ನೆಟ್ಟಿದ್ದು ಜನರ ಜನ ಜೀವನದ ಮೇಲೆಯೇ. ಮೊದಲ ದಿನದ ಮಾಡಬಾಳ ಪಂಚಾಯಿತಿ ಭೇಟಿಯು ತೆರೆದ ಚರಂಡಿಯಲ್ಲಿ ಒದ್ದಾಡುತ್ತಿರುವ ಹಂದಿಗಳ ಮೂಲಕ ಸ್ವಾಗತ ಸಿಕ್ಕಾಗ ಸ್ವಚ್ಛತೆಯೆಡೆಗಿನ ಪ್ರಾಮುಖ್ಯತೆ ಇಲ್ಲದಿರುವುದು ಮನಸ್ಸಿಗೆ ಒಂದು ರೀತಿಯ ಕಸಿವಿಸಿ ನೀಡಿತು. ಬಹುಷಃ ನಮ್ಮ ಮೂರು ದಿನದ ನಮ್ಮ ಪ್ರವಾಸದಲ್ಲಿ ಇನ್ನೂ ಬಯಲು ಶೌಚ ಮುಕ್ತರಾಗದ ಜನ, ಸ್ವಚ್ಛವಿಲ್ಲದಿರೋ ಶೌಚಾಲಯಗಳು, ಚರಂಡಿಯಿಲ್ಲದೆ ತ್ಯಾಜ್ಯವೆಲ್ಲ ರಸ್ತೆಯ ಮೇಲೆ ಹರಿದು ಮುಂದೆ ಕೆರೆಯನ್ನು ತುಂಬಿ ಕಲುಷಿತವಾಗಿರುವುದು. ಎಲ್ಲೆಂದರಲ್ಲಿ ಎಸೆದ ಕಸದ ರಾಶಿ. ಒಟ್ಟಲ್ಲಿ ಸರ್ಕಾರದ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕೊರತೆ ಎದ್ದು ಕಾಣುತಿತ್ತು. ಜನವಸತಿ ಪ್ರದೇಶ ಹಾಗೂ ತಾಂಡಗಳಲ್ಲಿ ಬಡತನದ ತೀವ್ರತೆ ಎದ್ದು ಕಾಣುತಿತ್ತು. ಕೂಲಿಗಾಗಿ ಈಗಲೂ ಗುಳೆ ಹೋಗುವ ಜನರ ಜೀವನ ಮಟ್ಟ ಸುಧಾರಣೆಯಾಗದಿರುವುದರ ಬಗ್ಗೆ ನಮ್ಮ ತಂಡದವರು ಬೇಸರ ವ್ಯಕ್ತಪಡಿಸಿದರು. ಕಲ್ಬುರ್ಗಿಯ ಜನರಲ್ಲಿ ಜಾಗೃತಿ ಮೂಡಿಸಿ ಪ್ರಸ್ತುತ ಪರಿಸ್ಥಿತಿಯಿಂದ ಹೊರಬಂದು ವ್ಯವಸ್ಥೆಯನ್ನು ಪ್ರಶ್ನಿಸುವ ದೈರ್ಯವನ್ನು ತುಂಬುವ ಅವಶ್ಯಕತೆಯ ಬಗ್ಗೆ ಚರ್ಚಿಸಲಾಯಿತು. ನಾವು ಭೇಟಿ ಕೊಟ್ಟ ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದನ್ನು ಪ್ರಶಂಸಿಶಲಾಯಿತು. ಎರಡನೇಯ ದಿನ ನಾವು ಭೇಟಿ ನೀಡಿದ ಭೀಮಳ್ಳಿ ಗ್ರಾಮ ಪಂಚಾಯಿತಿ ಕಲ್ಬುರ್ಗಿಯಲ್ಲೂ ಕೂಡ ಮಾದರಿ ಗ್ರಾಮ ಪಂಚಾಯಿತಿಯನ್ನು ಮಾಡಿ ತೋರಿಸಬಹುದು ಎನ್ನುವುದಕ್ಕೆ ಉದಾಹರಣೆಯಿದ್ದಂತಿತ್ತು. ಸರ್ವರನ್ನು ಸ್ವಾಗತಿಸುವ ಗ್ರಾಮೀಣ ಉದ್ಯಾನವನ, ವ್ಯವಸ್ಥಿತ ಗ್ರಾ.ಪಂ ಕಟ್ಟಡ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ, ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಎಲ್ಲವೂ ಗ್ರಾಮ ಪಂಚಾಯಿತಿ ಅನುದಾನದ ಸದ್ಬಳಕೆಯನ್ನು ಸಾಧ್ಯತೆಯನ್ನು ಎತ್ತಿ ತೋರಿಸಿದವು. ಕಲ್ಬುರ್ಗಿಯ ಎಲ್ಲ ಗ್ರಾ.ಪಂಗಳಲ್ಲಿ ಕಾರ್ಮಿಕ ಬೇಡಿಕೆ ಕೇಂದ್ರಿತವಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶದ ಪರಿಣಾಮಕಾರಿ ಅನುಷ್ಠಾನ ಮತ್ತು ಕೂಲಿ ಕಾರ್ಮಿಕರಿಗೆ ಉಪಯೋಗವಾಗುತ್ತಿರುವುದು ಸಮಧಾನ ನೀಡಿತು. ನಮ್ಮ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳಿಗೆ ವಿರುದ್ದವಾಗಿ ಕಲ್ಬುರ್ಗಿಯ ಪ್ರತಿ ಸರ್ಕಾರಿ ಶಾಲೆಗಳಲ್ಲಿ ನೂರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವುದನ್ನು ನೋಡಿ ಸಂತೋಷವಾಯಿತು. ಎಲ್ಲ ಗ್ರಾ.ಪಂಗಳಲ್ಲಿ ಗ್ರಂಥಾಲಯ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಪಡುತ್ತಿರುವುದು ಹಾಗೆಯೇ ಗ್ರಾಮಗಳ ಹಿಂದುಳಿದಿರುವಿಕೆಗೆ ಹಾಗೂ ಯೋಜನೆಗಳ ಅನುಷ್ಠಾನಗಳಲ್ಲಿ ಆಗುತ್ತಿರುವ ತಪ್ಪುಗಳ ಅಧ್ಯಯನಕ್ಕಾಗಿ ತಾಲ್ಲೂಕಿಗೊಬ್ಬ ಸಂಶೋಧನಾ ವಿದ್ಯಾರ್ಥಿಗಳನ್ನು ನೇಮಿಸಿರುವುದು ವ್ಯವಸ್ಥೆಯ ಬದಲಾವಣೆಗೆ ಆಡಳಿತದ ಪ್ರಶಂಸನೀಯ ಹೆಜ್ಜೆಯೇ ಸರಿ. ನಾಲ್ಕಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳಿದ್ದು ಎಲ್ಲಾ ರೀತಿಯ ಬೌದ್ಧಿಕ ಜ್ಞಾನವನ್ನು ಪಡೆಯಲು ಅವಕಾಶವಿರುವ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳನ್ನು ಹೊಂದಿರುವ, ಹೈಕೋರ್ಟಿನ ವಿಭಾಗೀಯ ಪೀಠವಿರುವ, ಭೀಮ ಮತ್ತು ಕೃಷ್ಣಾ ನದಿಯ ಕಾರಣದಿಂದ ಫಲವತ್ತಾದ ಕೃಷಿ ಭೂಮಿಯಿರುವ, ಸುಣ್ಣದ ಕಲ್ಲಿನ ಗಣಿಗಾರಿಕೆಗೆ ಹೆಸರುವಾಸಿಯಾಗಿರುವ ಕಲ್ಬುರ್ಗಿ ಜಿಲ್ಲೆಯ ಹೃದಯ ಶ್ರೀಮಂತರಾಗಿರುವ ಜನರ ಜೀವನ ಮಟ್ಟ ಸುಧಾರಣೆಯಾಗದಿರಲು ಕಾರಣವೇನು ಎಂಬ ಪ್ರಶ್ನೆ ನಮ್ಮನ್ನು ಬಹುವಾಗಿ ಕಾಡಿದ್ದು ಸತ್ಯ. ಬಹುಕಾಲದಿಂದ ಎಲ್ಲರಿಂದಲೂ ಆಳಿಸಿಕೊಂಡ ಈ ಪ್ರಾಂತ್ಯದ ಜನ ಗುಲಾಮಗಿರಿ ಸಂಸ್ಕೃತಿಯಿಂದ ಹೊರಬರದಿರುವುದು ಎದ್ದು ಕಾಣುತಿತ್ತು. ಎಲ್ಲ ಇದ್ದು ಏನು ಇಲ್ಲದವರಂತೆ ಬದುಕುವುದು ಅವರಿಗೆ ಅಭ್ಯಾಸವಾಗಿರಬಹುದು ಆದರೆ ಅವರೆಲ್ಲರೂ ಅಂತಹ ಮನಸ್ಥಿತಿಯಿಂದ ಹೊರಬರುವಂತಾಗಬೇಕೆನ್ನುವುದು ನಮ್ಮೆಲ್ಲರ ಸದಾಶಯ. ಏನೇ ಇರಲಿ. ಇವೆಲ್ಲದರ ಹೊರತಾಗಿ, ಕಲ್ಬುರ್ಗಿ ಜನರ ಕಲ್ಮಶರಹಿತ ಪ್ರೀತಿ ಮತ್ತು ಆದರದ ಆತಿಥ್ಯ ನಮ್ಮೆಲ್ಲರಿಗೂ ಹೆಚ್ಚು ಆಪ್ತವಾಗಿದ್ದು ಸುಳ್ಳಲ್ಲ. ನಮ್ಮದು ಬರೀ ಪ್ರವಾಸವಾಗಿದ್ದರೆ ಇಷ್ಟೆಲ್ಲ ಬರೆಯುವ ಅಗತ್ಯವಿರಲಿಲ್ಲ. ಇದೊಂದು ಗ್ರಾಮದೆಡೆಗಿನ ಸಾಂಸ್ಕೃತಿಕ ನಡಿಗೆ. ಸಾಮಾಜಿಕ ಜೀವನದ ಕೊಡು ಕೊಳ್ಳುವಿಕೆ, ರಾಜಕೀಯ ನಿಲುವುಗಳ ವಿಶ್ಲೇಷಣೆ, ವೈಚಾರಿಕ ವಿಷಯಗಳೊಂದಿಗಿನ ಗುದ್ದಾಟ. ಬದಲಾವಣೆಯೆಡೆಗೊಂದು ಹಾತೊರೆತ. ಒಟ್ಟಲ್ಲಿ ಈ ಕಲಿಕಾ ಪ್ರವಾಸ ನಮ್ಮಾಚೆಯ ಪ್ರಪಂಚದೆಡೆಗೊಂದು ಇಣುಕು ನೋಟ.
*ಪ್ರವಾಸ ಕಥಾ ಲೇಖನ” ಆಪಟ್ಟೀರ ಎಸ್.ಟಾಟೂ ಮೊಣ್ಣಪ್ಪ
ಅಧ್ಯಕ್ಷರು, ಮಾಯಮುಡಿ ಗ್ರಾಮ ಪಂಚಾಯಿತಿ,
ಪೊನ್ನಂಪೇಟೆ ತಾಲ್ಲೂಕು.











