ಮಡಿಕೇರಿ ನ.14 NEWS DESK : ಉದಯೋನ್ಮುಖ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೊಡಗಿನ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ಸರಕಾರ ಕೋಟ್ಯಾಂತರ ಅನುದಾನ ನೀಡುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನಾಲ್ಕನೇ ವರ್ಷದ ಐಪಿಎಲ್ ಮಾದರಿಯ ಕೊಡವ ಪ್ರೀಮಿಯರ್ ಲೀಗ್ ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಕ್ರಿಕೆಟ್ ಪಂದ್ಯಾಟವು ಇಂದು ದೇಶದ ಎಲ್ಲಾ ಕ್ರೀಡಾ ಪ್ರೇಮಿಗಳು ಇಷ್ಟಪಡುವ ಕ್ರೀಡೆಯಾಗಿದೆ. ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕೂಡ ಈ ರೀತಿಯ ಪಂದ್ಯಾವಳಿಗಳು ನಡೆಯುತ್ತಿರುವುದರಿಂದ ಪ್ರತಿಭಾವಂತ ಕ್ರಿಕೆಟ್ ಪಟುಗಳ ಬೆಳಕಿಗೆ ಬರಲು ಸಾಧ್ಯವಾಗುತ್ತಿದೆ ಎಂದರು. ಕೊಡಗು ಜಿಲ್ಲೆಯ ಹತ್ತಾರು ಶ್ರೇಷ್ಠ ಕ್ರಿಕೆಟ್ ಆಟಗಾರರು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಕೊಡಗಿನಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಕೋಟ್ಯಾಂತರ ಅನುದಾನ ನೀಡಿದ್ದು, ಇದು ಸದ್ಬಳಕೆಯಾಗಬೇಕು. ಸದ್ಯದಲ್ಲೇ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ತರಬೇತಿ ಕೇಂದ್ರಗಳು, ಮೈದಾನಗಳು ಹಾಗೂ ಕ್ರೀಡಾ ವಸತಿ ನಿಲಯಗಳು ಪೊನ್ನಂಪೇಟೆ, ವಿರಾಜಪೇಟೆ ಮತ್ತಿತರೆಡೆ ಕ್ರೀಡಾ ಪ್ರತಿಭೆಗಳಿಗೆ ಲಭ್ಯವಾಗಲಿದೆ ಎಂದು ಹೇಳಿದರು. ಸಿಗ್ಮ ನೆಟ್‌ವರ್ಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅವರೆಮಾದಂಡ ಶರಣ್ ಪೂಣಚ್ಚ, ಕೊಡವ ನಟಿ ಕಾಣತಂಡ ಬೀನ ಜಗದೀಶ್, ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ, ಉಪಾಧ್ಯಕ್ಷ ಚಕ್ಕೇರ ಕಾರ್ಯಪ್ಪ, ಕಾರ್ಯದರ್ಶಿ ಮುಕ್ಕಾಟಿರ ದೀಪಕ್, ನಿರ್ದೇಶಕರಾದ ರಂಜನ್ ಕಾರ್ಯಪ್ಪ, ಸಂಗಮ್ ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು. *12 ತಂಡಗಳ ಸೆಣಸಾಟ* ಅಂಜಿಗೇರಿ ನಾಡ್, ಡಿಈ ಕೋಚ್, ಟೀಮ್ ಕೊಡವ ಟ್ರೈಬ್, ಕೊಡವ ನೈಟ್ಸ್, ಕೊಡವ ವಾರಿಯರ್ಸ್, ಕೊಡವಾಮ್ಮೆ ಕಲ್ಟ್ಸ್, ಎಜೆ ಬಾಯ್ಸ್, ಟೀಮ್ ಮಹಾಗುರು, ಟೀಮ್ ಭಗವತಿ, ಮರೆನಾಡ್ ಯುನೈಟಡ್, ಎಂಟಿಬಿ ರಾಯಲ್ಸ್ ಮತ್ತು ಕೊಡವ ಬಂಬಂಗ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ನ.16 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಪ್ರಥಮ ವಿಜೇತ ತಂಡಕ್ಕೆ ರೂ.2 ಲಕ್ಷ, ದ್ವಿತೀಯ ರೂ.1 ಲಕ್ಷ, ತೃತೀಯ ರೂ.50 ಸಾವಿರ, ನಾಲ್ಕನೇ ವಿಜೇತ ತಂಡಕ್ಕೆ 25 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಸೇರಿದಂತೆ ವೈಯುಕ್ತಿಕ ಬಹುಮಾನ ನೀಡಲಾಗುವುದು. *ಮೊದಲ ದಿನದ ಫಲಿತಾಂಶ* ಕೊಡವ ವಾರಿಯರ್ಸ್ ಮತ್ತು ಅಂಜಿಗೇರಿ ನಾಡ್ ತಂಡಗಳ ನಡುವಿನ ಪಂದ್ಯದಲ್ಲಿ 8 ವಿಕೆಟ್‍ಗಳ ಅಂತರದಿಂದ ಅಂಜಿಗೇರಿ ನಾಡ್ ತಂಡ ಗೆಲುವು ಸಾಧಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಅಂಜಿಗೇರಿ ನಾಡ್ ತಂಡ 6 ಓವರ್‌ಗಳಲ್ಲಿ ಕೊಡವ ವಾರಿಯರ್ಸ್ ತಂಡದ 8 ವಿಕೆಟ್‍ಗಳನ್ನು ಕಬಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್ ತಂಡ ಕೊಡವ ವಾರಿಯರ್ಸ್ ನ 19 ರನ್ ಗಳನ್ನು ಬೆನ್ನಟ್ಟಿ ಕೇವಲ 2 ಓವರ್‍ಗಳಲ್ಲಿ 20 ರನ್‍ಗಳನ್ನು ಭಾರಿಸಿ ಗೆಲುವಿನ ನಗು ಬೀರಿತು. ಅಂಜಿಗೇರಿ ತಂಡದ ದೀಕ್ಷಿತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಡವ ನೈಟ್ಸ್ ಮತ್ತು ಟೀಮ್ ಕೊಡವ ಟ್ರೈಬ್ ನಡುವೆ ನಡೆದ ಪಂದ್ಯದಲ್ಲಿ ಕೊಡವ ನೈಟ್ಸ್ ತಂಡ 18 ರನ್‍ಗಳಿಂದ ವಿಜಯ ಸಾಧಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಡವ ನೈಟ್ಸ್ ತಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 64 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಕೊಡವ ಟ್ರೈಬ್ ತಂಡ 6 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 46 ರನ್ ಗಳನ್ನಷ್ಟೇ ಸೇರಿಸಿ ಸೋಲು ಅನುಭವಿಸಿತು. ಕೊಡವ ನೈಟ್ಸ್‍ನ ಪ್ರಶಾಂತ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಮರೆನಾಡ್ ಯುನೈಟಡ್ ಮತ್ತು ಕೊಡವ ಬಂಬಂಗ ನಡುವಿನ ಪಂದ್ಯದಲ್ಲಿ 21 ರನ್‍ಗಳಿಂದ ಮರೆನಾಡ್ ಯುನೈಟಡ್ ತಂಡ ಗೆಲುವು ಸಾಧಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೊಡವ ಬಂಬಂಗ ತಂಡ 6 ಓವರ್ ಗಳಲ್ಲಿ ಮರೆನಾಡ್ ಯುನೈಟಡ್ ನ 1 ವಿಕೆಟ್ ನ್ನು ಮಾತ್ರ ಪತನಗೊಳಿಸಿತು. ಮರೆನಾಡ್ ಯುನೈಟಡ್ ತಂಡ ಸೇರಿಸಿದ 51 ರನ್‍ಗಳನ್ನು ಬೆನ್ನಟ್ಟಿದ ಕೊಡವ ಬಂಬಂಗ ತಂಡ 6 ಓವರ್‌ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 30 ರನ್ ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು. ಮರೆನಾಡ್ ಯುನೈಟಡ್ ನ ಶರತ್ ಎ.ಎನ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.
ಟೀಮ್ ಮಹಾಗುರು ಮತ್ತು ಎಂಟಿಬಿ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್ ತಂಡ 6 ವಿಕೆಟ್‍ಗಳ ಜಯ ಸಾಧಿಸಿತು. ಟಾಸ್ ಗೆದ್ದ ಎಂಟಿಬಿ ರಾಯಲ್ಸ್ ಬೌಲಿಂಗ್ ಆಯ್ದುಕೊಂಡು 6 ಓವರ್‌ಗಳಲ್ಲಿ ಟೀಮ್ ಮಹಾಗುರು ತಂಡದ 9 ವಿಕೆಟ್‍ಗಳನ್ನು ಪತನಗೊಳಿಸಿತು. ಟೀಮ್ ಮಹಾಗುರು ಸೇರಿಸಿದ 29 ರನ್‍ಗಳನ್ನು ಬೆನ್ನಟ್ಟಿದ ಎಂಟಿಬಿ ರಾಯಲ್ಸ್ 4.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 30 ರನ್‍ಗಳನ್ನು ಸೇರಿಸಿ ಗೆಲುವು ಸಾಧಿಸಿತು. ಎಂಟಿಬಿ ರಾಯಲ್ಸ್‍ನ ಶಿಪ್ರಜ್ ಸೋಮಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಕೊಡವ ವಾರಿಯರ್ಸ್ ಮತ್ತು ಡಿಈ ಕೋಚ್ ನಡುವಿನ ಪಂದ್ಯದಲ್ಲಿ ಕೊಡವ ವಾರಿಯರ್ಸ್ 19 ರನ್‍ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಡವ ವಾರಿಯರ್ಸ್ ತಂಡ 6 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 89 ರನ್‍ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಡಿಈ ಕೋಚ್ ತಂಡ 6 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್‍ಗಳನ್ನಷ್ಟೇ ಸೇರಿಸಿ ಸೋಲೊಪಿಕೊಂಡಿತು. ಕೊಡವ ವಾರಿಯರ್ಸ್‍ನ ಗೌತಮ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಎಜೆ ಬಾಯ್ಸ್ ಮತ್ತು ಟೀಮ್ ಭಗವತಿ ನಡುವಿನ ಪಂದ್ಯದಲ್ಲಿ ಎಜೆ ಬಾಯ್ಸ್ 7 ವಿಕೆಟ್‍ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಭಗವತಿ ತಂಡ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 52 ರನ್‍ಗಳನ್ನು ಸೇರಿಸಿತು. ಎಜೆ ಬಾಯ್ಸ್ ತಂಡ 5 ವಿಕೆಟ್ ನಷ್ಟಕ್ಕೆ 56 ರನ್ ದಾಖಲಿಸಿ ಗೆಲುವು ಸಾಧಿಸಿತು. ಎಜೆ ಬಾಯ್ಸ್‍ನ ನೆಲ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಅಂಜಿಗೇರಿ ನಾಡ್ ಮತ್ತು ಕೊಡವಾಮ್ಮೆ ಕಲ್ಟ್ಸ್ ನಡುವಿನ ಪಂದ್ಯದಲ್ಲಿ ಅಂಜಿಗೇರಿ ನಾಡ್ 8 ವಿಕೆಟ್‍ಗಳ ಜಯ ಸಾಧಿಸಿತು. ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಕೊಡವಾಮ್ಮೆ ಕಲ್ಟ್ಸ್ ತಂಡ 6 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 30 ರನ್‍ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಅಂಜಿಗೇರಿ ನಾಡ್ 4.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 31 ರನ್ ದಾಖಲಿಸಿ ವಿಜಯ ಸಾಧಿಸಿತು. ಅಂಜಿಗೇರಿ ನಾಡ್ ತಂಡದ ಮಿಥುನ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.











