

ವಿರಾಜಪೇಟೆ ನ.19 NEWS DESK : ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಯುವಕವಿ ಲವಿನ್ ಲೋಪೇಸ್ ಬರೆದಿರುವ ಮೌನದ ಮನಸ್ಸಿನಲ್ಲಿ ಚೊಚ್ಚಲ ಕೃತಿಯು ನ.23 ರಂದು ವಿರಾಜಪೇಟೆಯ ಮೊಗರಗಲ್ಲಿಯಲ್ಲಿನ ಕಲಾ ಉತ್ಸವ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಲವಿನ್ ಅವರು ತಮ್ಮ ಸ್ವಂತ ಪ್ರಕಾಶನದ ಮೂಲಕ ಹೊರತಂದಿರುವ ತಮ್ಮ ಕನಸಿನ ಕೂಸು ಮೌನದ ಮನಸ್ಸಿನಲ್ಲಿ ಕೃತಿಯನ್ನು ಸಾದಿಕ್ ಆರ್ಟ್ಸ್ ವತಿಯಿಂದ ಮೊಗರಗಲ್ಲಿಯಲ್ಲಿ ನಡೆಯುತ್ತಿರುವ ಕಲಾ ಉತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ಸಾಹಿತಿ ವಿ.ಎನ್. ರಜಿತ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯ ಕುರಿತು ಸಾಹಿತಿ ಪುಷ್ಪಲತಾ ಶಿವಪ್ಪ ಮಾತನಾಡಲಿದ್ದಾರೆ. ಪ್ರಾದ್ಯಾಪಕರಾದ ಡಾ.ಕಾವೇರಿ ಪ್ರಕಾಶ್ ಮುನ್ನುಡಿ ಬರೆದು ಹರಸಿದರೆ, ಸಾಹಿತಿ ವಿ.ಎನ್.ರಜಿತ ಅವರು ಬೆನ್ನುಡಿ ಬರೆದಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಮಹಮ್ಮದ್ ಶಾಫಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ. ಲವಿನ್ ಲೋಪೆಸ್ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಬರವಣಿಗೆಯನ್ನು ಕರಗತ ಮಾಡಿಕೊಂಡು, ತಮ್ಮ ಮನಸ್ಸಿನ ಭಾವನೆಗಳನ್ನು ಕವಿತೆ ಮೂಲಕ ಹೊರಹಾಕಿ ಸಂಕಲನ ರೂಪದಲ್ಲಿ ಹೊರತಂದಿದ್ದಾರೆ.












