ಮಡಿಕೇರಿ ನ.19 NEWS DESK : ಮುಕ್ಕಾಟಿರ(ದೇವಣಗೇರಿ) ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವಣ 5ನೇ ವರ್ಷದ ‘ಕೊಡವ ಫುಟ್ಬಾಲ್ ಉತ್ಸವ’ವು 2026ರ ಏ.7 ರಿಂದ 12ರವರೆಗೆ ಗೋಣಿಕೊಪ್ಪಲುವಿನಲ್ಲಿ ನಡೆಯಲಿದೆಯೆಂದು ಪಂದ್ಯಾವಳಿ ಆಯೋಜನಾ ಸಮಿತಿಯ ಅಧ್ಯಕ್ಷ ಮುಕ್ಕಾಟಿರ ಸಿ.ಕರುಂಬಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೌಟುಂಬಿಕ ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಪ್ರಸ್ತುತ ದೊಡ್ಡ ಮಟ್ಟದಲ್ಲಿ ಬೆಳೆದು, ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿವೆ. ಅದೇ ರೀತಿ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಲು ಹಾಗೂ ಕೊಡವ ಸಮುದಾಯದವರನ್ನು ಒಂದಾಗಿ ಬೆಸೆಯುವ ಚಿಂತನೆಗಳಡಿ ಫುಟ್ಬಾಲ್ ಉತ್ಸವವನ್ನು ಆಯೋಜಿಸುತ್ತಿರುವುದಾಗಿ ಹೇಳಿದರು. ಗೋಣಿಕೊಪ್ಪಲು ಸಮೀಪದ ಅಥ್ಲಾನ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಕಳೆದ ಬಾರಿಯ ಪಂದ್ಯಾವಳಿಯಲ್ಲಿ 74 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 100 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿ ಐವರು ಆಟಗಾರರ ತಂಡಗಳ ನಡುವೆ ನಡೆಯಲಿದೆ. ಪ್ರತಿ ತಂಡದಲ್ಲಿ ಇಬ್ಬರು ಅತಿಥಿ ಆಟಗಾರರು ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಈ ಅತಿಥಿ ಆಟಗಾರರು ಸಮುದಾಯಕ್ಕೆ ಸೇರಿದವರಾಗಿರಬೇಕೆಂದು ಸ್ಪಷ್ಟÀಪಡಿಸಿದರು. ಆರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಪ್ರತಿನಿತ್ಯ ಸುಮಾರು 20 ಪಂದ್ಯಗಳು ನಡೆಯಲಿದೆ. ಪ್ರತಿ ಪಂದ್ಯ 20 ನಿಮಿಷಗಳ ಅವಧಿಯದ್ದಾಗಿರುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆಯೆಂದು ತಿಳಿಸಿದರು. :: ನೋಂದಣಿ-ಮಾಹಿತಿಗೆ ಸಂಪರ್ಕಿಸಿ :: ಪಂದ್ಯಾವಳಿಗೆ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಎಂ.ಸಿ.ಕರುಂಬಯ್ಯ ಮೊ.9341957895, ನಿಕ್ಕಿ ಅಪ್ಪಚ್ಚು ಮೊ.9845343970, ಎಂ.ಎಸ್.ಸೋಮಯ್ಯ ಮೊ.9902429414, ಸ್ಮರಣ್ ಚಂಗಪ್ಪ ಮೊ.8970484803ಯನ್ನು ಸಂಪರ್ಕಿಸಬಹುದಾಗಿದೆ. ಪಂದ್ಯಾವಳಿ ಆಯೋಜನ ಸಮಿತಿ ಸದಸ್ಯರು ಹಾಗೂ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆಯಾದ ನೃತ್ಯ ಕಲಾವಿದೆ ಮುಕ್ಕಾಟಿರ ಶಿಲ್ಪ ನಂಜಪ್ಪ ಮಾತನಾಡಿ, ಪಂದ್ಯಾವಳಿಗೆ ನೋಂದಣಿ ಇಂದಿನಿಂದ ಆರಂಭಗೊಳ್ಳಲಿದೆ. ಕಳೆದ ಬಾರಿಗಿಂತ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಡಗಳ ಸಂಖ್ಯೆ ನೂರನ್ನು ಮುಟ್ಟುವವರೆಗೆ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತದೆಂದು ತಿಳಿಸಿದರು. ಪಂದ್ಯಾವಳಿ ಆಯೋಜನಾ ಸಮಿತಿ ಸದಸ್ಯರು ಹಾಗೂ ಮಹಿಳಾ ಕಾಫಿ ಸಂಘಟನೆಯ ಅಧ್ಯಕ್ಷರಾದ ಮುಕ್ಕಾಟಿರ ಜ್ಯುತಿಕ ಬೋಪಣ್ಣ ಅವರು ಮಾತನಾಡಿ, ಪಂದ್ಯಾವಳಿ ನಡೆಯುವ ಅಥ್ಲಾನ್ ಮೈದಾನದ ಆವರಣದಲ್ಲಿ ಆಟಗಾರರು ಮತ್ತು ಪ್ರೇಕ್ಷಕ ವರ್ಗದ ಅನುಕೂಲಕ್ಕೆ ಪೂರಕವಾಗಿ ಶೌಚಾಲಯ ವ್ಯವಸ್ಥೆ, ಆಹಾರ ಸೌಲಭ್ಯ, ಸ್ವಚ್ಛತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿ ಸದಸ್ಯರಾದ ಮುಕ್ಕಾಟಿರ ಎಸ್.ಸೋಮಯ್ಯ, ಮುಕ್ಕಾಟಿದ ಎಸ್.ಬೋಪಣ್ಣ, ಮುಕ್ಕಾಟಿರ ಸುಚಿ ಬೋಪಣ್ಣ ಉಪಸ್ಥಿತರಿದ್ದರು.










