ಮಡಿಕೇರಿ ನ.20 NEWS DESK : ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಸಹಕಾರ ಸಂಸ್ಥೆಗಳು ಎಲ್ಲಾ ವಲಯಗಳನ್ನು ವ್ಯಾಪಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಸೇವೆ ಒದಗಿಸುತ್ತಾ ಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉನ್ನತಿ ಭವನದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು, ಮಾತನಾಡಿದರು. ಸಹಕಾರ ಎಂದರೆ ಸಮೂಹಿಕ ನಂಬಿಕೆ, ಶ್ರಮ, ನ್ಯಾಯದ ಹಂಚಿಕೆ. ಸಹಕಾರ ಚಳುವಳಿ ದೇಶದ ಆರ್ಥಿಕತೆಗೆ ಮಹತ್ವದ ಪಾತ್ರ ವಹಿಸಿದೆ. ಇದು ದೇಶದ ಆರ್ಥಿಕತೆಗೆ ರೈತರಿಗೆ ಸಾಲ, ಸಣ್ಣ ಕೈಗಾರಿಕೆಗಳಿಗೆ ಬೆಂಬಲ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಮೂಲಕ ಗಣನೀಯ ಕೊಡುಗೆ ನೀಡಿದೆ. ಆರ್ಥಿಕ ಬೆಳವಣಿಗೆಯಲ್ಲದೆ, ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ ಮತ್ತು ಕೃಷಿ, ಡೈರಿ, ಮತ್ತು ಹಣಕಾಸು ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಆರ್ಥಿಕತೆಯನ್ನು ಬೆಂಬಲಿಸಿದೆ. ದೇಶದ ಕಡು ಬಡವರಿಗೆ, ಕೃಷಿಕರಿಗೆ ಸಹಕಾರಿ ಬ್ಯಾಂಕ್‍ಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನೇರವಾಗಿ ಸುಲಭವಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು. ಸಹಕಾರಿ ಕ್ಷೇತ್ರ ಉತ್ತಮ ಸ್ಥಿತಿಗೆ ಬರಬೇಕಾದರೆ ಅಧ್ಯಕ್ಷರು, ಅಧಿಕಾರಿಗಳು, ಹಾಗೂ ಸಿಬ್ಬಂದಿಗಳ ಪ್ರಮಾಣಿಕ ಕಾರ್ಯ ಮುಖ್ಯ. ಹಲವು ಗಣ್ಯರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದು, ಹಿರಿಯರ ಕೆಲಸವನ್ನು ಗುರುತಿಸಿ, ಗೌರವಿಸಿದರೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ. ಮುಂದಿನ ದಿನಗಳಲ್ಲಿಯೂ ಸಹಕಾರಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವ ಮೂಲಕ ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, 27ನೇ ಸಹಕಾರ ಸಪ್ತಾಹವನ್ನು ಭಾರತದಲ್ಲಿ ರಾಷ್ಟ್ರೀಯ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ ಎಂದರು.
ಕೊಡಗಿನಲ್ಲಿ ಸಹಕಾರ ಸಂಘದ ಚಳವಳಿ 1905 ರಲ್ಲಿ ಪ್ರಾರಂಭವಾಯಿತು. ಏಷ್ಯಾ ಮತ್ತು ಭಾರತದಲ್ಲೇ ಎರಡನೇಯ, ಕೊಡಗು ಜಿಲ್ಲೆಯ ಮೊದಲ ಸಹಕಾರ ಸಂಘವು ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಸ್ಥಾಪನೆಯಾಯಿತು. ಈ ಸಂಘಗಳು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿವೆ. ಜಿಲ್ಲೆಯಲ್ಲಿ 311 ಸಹಕಾರ ಸಂಘ ನೊಂದಾವಣಿಯಾಗಿದ್ದು, 300 ಸಹಕಾರ ಸಂಘ ಕ್ರಿಯಾಶಿಲವಾಗಿ ಕಾರ್ಯನಿರ್ವಹಿಸುತ್ತಿದೆ. 7 ದವಸ ಭಂಡಾರ, 9 ಕೃಷಿ ಪತ್ತಿನ ಸಹಕಾರ ಸಂಘಗಳು ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ಹಲವು ಸಹಕಾರ ಸಂಘಗಳು ಇನ್ನೂರು ಕೋಟಿಗೂ ಅಧಿಕ ವಾರ್ಷಿಕ ವಾಹಿವಾಟು ನಡೆಸುತ್ತಿದೆ ಎಂದು ಹೇಳಿದರು. ಕೊಡಗು ಬೆಳೆಗಾರರ ಸಹಕಾರ ಸಂಘ ಅತೀ ಹೆಚ್ಚು ಸದಸ್ಯತ್ವ ಹೊಂದಿರುವ ಸಂಘ ಎಂದು ಇಡೀ ದೇಶದಲ್ಲಿ ಸಾಧನೆ ಮಾಡಿದ್ದು, ಕೊಡಗಿನ ವಾತಾವರಣಕ್ಕೆ ಸರಿಯಾಗಿ ಬೆಳೆಗಾರರಿಗೆ ಸಹಕಾರ ನೀಡುತ್ತ ಬಂದಿದೆ. ಅಲ್ಲದೇ ಜಿಲ್ಲೆಯ ಸಹಕಾರ ಸಂಘಗಳು ತಮ್ಮದೇ ಆದ ಜಾಗವನ್ನು ಹೊಂದುವ ಮೂಲಕ ಭದ್ರ ಬುನಾದಿ ಹಾಕಿದೆ. ಪ್ರಮಾಣಿಕ, ಪಾರದರ್ಶಕತೆ, ಭ್ರಷ್ಟಚಾರ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ಸಹಕಾರ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಹಕಾರ ಚಳುವಳಿಯನ್ನು ಬಲಪಡಿಸುವುದು, ಸಹಕಾರಿ ಸಂಘಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವುದು ಮತ್ತು ‘ಆತ್ಮನಿರ್ಭರ ಭಾರತ’ ಸಾಧನೆಗೆ ಸಹಕಾರಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು. ಇದರ ಜೊತೆಗೆ, ಪ್ರವಾಸೋದ್ಯಮ, ಆರೋಗ್ಯ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಸಹಕಾರಿ ಸಂಘಗಳನ್ನು ವಿಸ್ತರಿಸುವುದು, ಸಹಕಾರಿ ಕ್ಷೇತ್ರದ ಸಾಧನೆಗಳನ್ನು ಅವಲೋಕಿಸುವುದು ಮತ್ತು ಸಂಘದ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಸಲಾಗುವುದು. ಸಹಕಾರ ಸಂಘದಲ್ಲಿ ಸದಸ್ಯರಿಗೂ ಸಂಘದ ಲೆಕ್ಕಗಳನ್ನು ಕೇಳುವ ಮತ್ತು ಪಡೆಯುವ ಅಧಿಕಾರವಿದೆ. ಸಂಘದಲ್ಲಿ ಸದಸ್ಯರೇ ಮಾಲೀಕರು ಎಂದರು. ಎಲ್ಲಾ ಸಹಕಾರ ಸಂಘಕ್ಕೆ ಮೊದಲ ಬಾರಿಗೆ ಏಕರೂಪದ ತಂತ್ರಾಂಶವನ್ನು ಅಳವಡಿಸುವ ಮೂಲಕ ಪರದರ್ಶಕ ಹೊಂದಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕಟ್ಟಕಡೆಯ ವ್ಯಕ್ತಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಕೊಡಗಿನ ಬೌಗೋಳಿಕ, ದಾಖಲಾತಿ ಸಮಸ್ಯೆ, ಜಾಗದ ಸಮಸ್ಯೆಯಂದ ಬಹುಸೇವ ಕೇಂದ್ರ ಸ್ಥಾಪನೆಗೆ ಸಮಸ್ಯೆಯಾಗಿದೆ. ವಲಯದಿಂದ ಉದ್ಯೋಗ ಸೃಷಿ,್ಠ ಗೋದಾಮುಗಳ ನಿರ್ಮಾಣ ಮೂಲಭೂತ ಸೌಕರ್ಯಗಳನ್ನು ಸಂಘಗಳು ಒದಗಿಸುವ ಮೂಲಕ ಪ್ರಾಥಮಿಕ ಸಹಕಾರಿ ಸಂಘಗಳು ವಿಶೇಷ ಕೊಡುಗೆಯನ್ನು ನೀಡುತ್ತಾ ಸಾಗಿವೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸ್ವಂತ ಬಂಡವಾಳ ಹೊಂದಿ ಸ್ವಂತ ಸಂಸ್ಥೆಯನ್ನು ಆರಂಭಿಸಿ, ಕಾರ್ಯನಿರ್ವಹಿಸುತ್ತಿದ್ದು, ಠೇವಣಿ ಸಂಗ್ರಹಣೆಯಲ್ಲಿ 3ನೇ ಸ್ಥಾನ, ಸಾಲ ನೀಡುವುದರಲ್ಲಿ 2ನೇ ಸ್ಥಾನದಲ್ಲಿದೆ ಎಂದರು. ಈಗಾಗಲೇ 24 ಶಾಖೆಗಳನ್ನು ಹೊಂದಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಡಿಸೆಂಬರ್ ತಿಂಗಳಿನಲ್ಲಿ ತಿತಿಮತಿಯಲ್ಲಿ 25ನೇ ಶಾಲೆಯನ್ನು ಆರಂಭಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಒಟ್ಟು 31 ಶಾಖೆಗಳನ್ನು ಆರಂಭಿಸಲು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು. ಕೊಡಗಿನ ಪ್ರಥಮ ಸಹಕಾರ ಸಂಘದ ಸ್ಥಾಪಕರಾದ ಕುರಾದ ಗೌಡ್ನ ಮನೆ ಪಿ.ದೊಡ್ಡಯ್ಯ ಅವರ ಭಾವಚಿತ್ರವನ್ನು ಎಲ್ಲಾ ಸಹಕಾರ ಸಂಘಗಳಿಗೆ ನೀಡಲಾಗುವುದು. ಇದರ ಸಂಪೂರ್ಣ ವೆಚ್ಚವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಭರಿಸಲಿದೆ ಎಂದು ಹೇಳಿದರು. ಅಲ್ಲದೇ ಎಲ್ಲಾ ಸಂಹಕಾರ ಸಂಘದಲ್ಲಿ ಸ್ಥಾಪಕ ಅಧ್ಯಕ್ಷರ ಭಾವಚಿತ್ರವನ್ನು ಅಳವಡಿಸುವಂತೆ ಸಲಹೆ ನೀಡಿದರು.
ಐದು ದಿನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರಿಗೆ ತರಬೇತಿ ನೀಡಲಾಗುವುದು ಎಂದರು. ಕೊಡಗಿನ ಸಹಕಾರ ಕ್ಷೇತ್ರವನ್ನು ರಾಜ್ಯಮಟ್ಟಕ್ಕೆ ತರಲು ಪ್ರಮಾಣಿಕ ಮತ್ತು ಪರದರ್ಶಕವಾಗಿ ಕಾರ್ಯನಿರ್ವಹಿಸಲಾಗವುದೆಂದ ಅವರು, ಸಹಕಾರಿ ಸಂಘಗಳು ಒಳ್ಳೆಯದತ್ತ ದಾಪುಗಾಲು ಹಾಕುತ್ತಾ ಸಾಗಲಿ ಎಂದು ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿ ಚಿರಿಯಪಂಡ ಕೆ.ಉತ್ತಪ್ಪ ಸಹಕಾರ ಸಂಘ ಉತ್ತಮ ರಂಗವಾಗಿದ್ದು, ಜಿಲ್ಲೆಯಲ್ಲಿ ಸಮೃದ್ಧಿಯಾಗಿ ಬೆಳೆದಿದೆ. ತಾನು ಮಾಡಿದ ಕೆಲಸದಲ್ಲಿ ತೃಪ್ತಿ ಕಂಡಿದ್ದೇನೆ. ಯುವ ಪೀಳಿಗೆ ಸಹಕಾರ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ, ದೈನಂದಿನ ಚಟುವಟಿಕಳಲ್ಲಿ ಕಾನೂನು ಕಾಯ್ದೆಗಳು ಬದಲಾಗುತ್ತಿದ್ದು, ಅವುಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ತರಬೇತಿ, ಕಾರ್ಯಾಗಾರಗಳು ಅತೀ ಮುಖ್ಯ. ಆದ್ದರಿಂದ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಳೆದ 7 ದಿನಗಳಿಂದ ಪೆರಾಜೆ, ಪಾಲಿಬೆಟ್ಟ, ಸುಂಟಿಕೊಪ್ಪ, ಸೋಮವಾರಪೇಟೆ, ಕಾನೂರು, ದೇವಣಗೇರಿ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಯಲ್ಲಿ ಸಹಕಾರ ಸಪ್ತಾಹವನ್ನು ಆಚರಿಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಅಧ್ಯಕ್ಷರು ನಿರ್ದೇಶಕರು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರು ಹಾಗೂ ಕೆಐಸಿಎಂ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲಾ ಅವರು ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವಿನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಎಂಬ ವಿಷಯದ ಕುರಿತು ವಿಷಯ ಮಂಡಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ, ಸಹಕಾರ ಯೂನಿಯನ್‍ನ ನಿರ್ದೇಶಕರಾದ ಎ.ಕೆ.ಮನು ಮುತ್ತಪ್ಪ, ಕೆ.ಎಂ.ತಮ್ಮಯ್ಯ, ವಿ.ಕೆ.ಅಜಯ್ ಕುಮಾರ್, ಎ.ಎಸ್.ಶ್ಯಾಂಚಂದ್ರ, ಕೆ.ಟಿ.ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ವಿ.ಸಿ.ಅಮೃತ್, ಎಸ್.ಆರ್.ಸುನಿಲ್ ರಾವ್, ಎ.ಸಿ.ಕುಶಾಲಪ್ಪ, ಎಂ.ಟಿ.ಸುಬ್ಬಯ್ಯ, ಎ.ಎಂ.ಮುತ್ತಪ್ಪ, ಪಿ.ಎನ್.ಚಂದ್ರಪ್ರಕಾಶ್, ಹೆಚ್.ಎಂ.ರಮೇಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕ ಹೆಚ್.ಜೆ.ಸತೀಶ್ ಕುಮಾರ್, ಕೆ.ಎನ್.ಸತೀಶ್, ಕುಂಞಂಗಡ ಅರುಣ್ ಭೀಮಯ್ಯ, ಪೂಳಂಡ ಪಿ.ಪೆಮ್ಮಯ್ಯ, ಗುಮ್ಮಟ್ಟಿರ ಎಸ್.ಕಿಲನ್ ಗಣಪತಿ, ಎಸ್.ಸಿ.ಶರತ್ ಶೇಖರ್, ನಾಪಂಡ ಉಮೇಶ್ ಉತ್ತಪ್ಪ, ಪಟ್ರಪಂಡ ರಘು ನಾಣಯ್ಯ, ವೃತ್ತಿಪರ ನಿರ್ದೇಶಕ ಎಂ.ಸಿ.ನಾಣಯ್ಯ, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಡಿ.ರವಿಕುಮಾರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಎಂ.ಎನ್.ಹೇಮಾವತಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕರಾದ ಎಂ.ಎನ್.ಹೇಮಾವತಿ, ಸಹಾಯಕ ನಿಬಂಧಕರಾದ ಶೈಲಜಾ ಹಾಜರಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಹೆಚ್.ಕೆ.ಮಾದಪ್ಪ ಸ್ವಾಗತಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು, ಯೂನಿಯನ್ ನಿಬ್ಬಂದಿ ಮಂಜುಳಾ ಸನ್ಮಾನಿತರ ಪರಿಚಯ ಮಾಡಿದರು. ಸನ್ಮಾನ :: ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಚಿರಿಯಪಂಡ ಕೆ.ಉತ್ತಪ್ಪ ಅವರಿಗೆ ಕೊಡಗು ಸಹಕಾರ ರತ್ನ, ಹೆಚ್.ಎಸ್.ಮುದ್ದಪ್ಪ, ತಳೂರು ಎ.ಕಿಶೋರ್‍ಕುಮಾರ್ ಶ್ರೇಷ್ಠ ಸಹಕಾರಿ, ದೇವಾಂಬಿಕ ಮಹೇಶ್ ಶ್ರೇಷ್ಠ ಮಹಿಳಾ ಸಹಕಾರಿ ಮತ್ತು ನಿವೃತ್ತ ಸಹಕಾರಿ ಸಿಬ್ಬಂದಿ ಆಲೆಮಾಡ ಎಸ್.ಕಾವೇರಮ್ಮ ಅವರಿಗೆ ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಷ್ಪ ನಮನ :: ಕಾರ್ಯಕ್ರಮಕ್ಕೂ ಮುನ್ನ ಭಾರತದ ಸಹಕಾರ ಆಂದೋಲನದ ಮೂಲ ಪುರುಷ ಶಿದ್ದನಗೌಡ ಸಂಣರಾಮನ ಗೌಡ ಪಾಟೀಲ ಹಾಗೂ ಕೊಡಗಿನ ಪ್ರಥಮ ಸಹಕಾರಿ ಕುರಾದ ಗೌಡ್ನ ಮನೆ ಪಿ.ದೊಡ್ಡಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.












