ಮೈಸೂರು ನ.26 NEWS DESK : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಂಬಾಕು ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಇವರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ವಾಣಿಜ್ಯ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿರುವ ಸಂಸದರು, ತಂಬಾಕು ಖರೀದಿಗೆ ಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. ಈಗಿರುವ ಮಾಹಿತಿ ಪ್ರಕಾರ ಸುಮಾರು 10 ಸಾವಿರ ಕಾರ್ಡ್‌ದಾರ ಬೆಳೆಗಾರರು ಸುಮಾರು 10 ಮಿಲಿಯನ್ ಕೆಜಿ ತಂಬಾಕು ಬೆಳೆ ಬೆಳೆದಿದ್ದಾರೆ. ಆದರೆ ಇದನ್ನು ಅನಧಿಕೃತ ಎಂದು ಘೋಷಣೆ ಮಾಡಿರುವುದರಿದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಆರ್ಥಿಕವಾಗಿ ತೀರಾ ಸಂಕಷ್ಟ ಎದುರಿಸುತ್ತಿರುವ ಬೆಳೆಗಾರರನ್ನು ಪಾರು ಮಾಡಲು ಈ ಕೂಡಲೇ ತಂಬಾಕು ಬೆಳೆಯ ಖರೀದಿಗೆ ಅವಕಾಶ ಮಾಡಿಕೊಡಬೇಕೆಂದು ವಾಣಿಜ್ಯ ಸಚಿವರಿಗೆ ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಲೆಕ್ಕಾಚಾರ ಗಮನಿಸಿದಾಗ, ನೋಂದಾಯಿತ ಹಾಗೂ ನೋಂದಾಯಿತರಲ್ಲದ ಬೆಳೆಗಾರರು ರಾಜ್ಯದಲ್ಲಿ 100 ಮಿಲಿಯನ್ ಕೆಜಿ ತಂಬಾಕು ಬೆಳೆಯುತ್ತಿದ್ದಾರೆ. ಆದರೆ ಹವಾಮಾನ ಬದಲಾವಣೆ ಹಾಗೂ ಇತರೆ ಸಮಸ್ಯೆಗಳಿಂದಾಗಿ ಈ ಪ್ರಮಾಣ 80 ಮಿಲಿಯನ್ ಕೆಜಿಗೆ ಇಳಿದಿದೆ ಎಂದು ಸಂಸದರು ವಿವರಿಸಿದ್ದಾರೆ. :: ನೋಂದಾಯಿತ ಮಾನ್ಯತೆ ನೀಡಿ :: ನೋಂದಾಯಿತರಲ್ಲದ ತಂಬಾಕು ಬೆಳೆಗಾರರನ್ನು ನೋಂದಾಯಿತ ತಂಬಾಕು ಬೆಳೆಗಾರರು ಎಂಬ ಮಾನ್ಯತೆ ನೀಡಬೇಕು. ಜೊತೆಗೆ ಖರೀದಿ ಪ್ರಮಾಣವನ್ನ ಶೇ. 10ರಷ್ಟು ಹೆಚ್ಚಳ ಮಾಡಬೇಕು. ಇದರಿಂದ ಒಟ್ಟಾರೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಂಬಾಕು ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಿ ಅವರಿಗೆ ನೆರವಾಗಬೇಕು ಎಂದು ಪಿಯೂಷ ಗೋಯಲ್ ಅವರಿಗೆ ಸಂಸದ ಯದುವೀರ್ ಒಡೆಯರ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.










