ಮಡಿಕೇರಿ ಡಿ.12 NEWS DESK : ‘ಶಿಸ್ತು’ನ್ನು ಕ್ರೀಡಾ ಮೈದಾನದ ಒಳ ಮತ್ತು ಹೊರಗೂ ವಿದ್ಯಾರ್ಥಿಗಳು ಪಾಲಿಸಬೇಕೆಂದು ಕೊಡಗು ಸೈನಿಕ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್ ಕರೆ ನೀಡಿದರು. ಕೊಡಗು ಸೈನಿಕ ಶಾಲೆಯ 2025-26ನೇ ವಾರ್ಷಿಕ ಕ್ರೀಡಾಕೂಟವನ್ನು ಶಾಲೆಯ ಮರಿಯಪ್ಪ ಕೆಂಪಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಉದ್ಘಾಟಿಸಿ, ಕ್ರೀಡಾಕೂಟದ ಸಂಕೇತವಾಗಿ ಪಾರಿವಾಳಗಳನ್ನು ಹಾರಿಬಿಟ್ಟು ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಹಾಗೂ ಪ್ರಾಮಾಣಿಕತೆಯನ್ನು ಸದಾ ಪಾಲಿಸಬೇಕೆಂದು ತಿಳಿಸಿ, ನ್ಯಾಯಯುತ ಆಟ, ಶಿಸ್ತು ಮತ್ತು ಪರಿಶ್ರಮದ ಗುಣಗಳು ಭವಿಷ್ಯದಲ್ಲಿ ಉತ್ತಮ ನಾಯಕರನ್ನು ರೂಪಿಸುವಲ್ಲಿ ನೆರವಾಗುತ್ತವೆಂದರು. ಶಾಲೆಯು ಶೈಕ್ಷಣಿಕ ಸಾಧನೆ ಹಾಗೂ ಮೂಲಭೂತ ಸೌಕರ್ಯಗಳ ಬೆಳವಣಿಗೆಯಲ್ಲಿ ಕಂಡುಬಂದ ಗಣನೀಯ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಮತ್ತಷ್ಟು ಸಾಧನೆಯ ಶಿಖರವನ್ನೇರಲು ನಿರಂತರ ಪ್ರಯತ್ನಿಸಬೇಕೆಂದು ತಿಳಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನವನ್ನು ನಡೆಸಿಕೊಟ್ಟರು. ಕ್ರೀಡಾ ಉಪ ನಾಯಕನಾದ ಕೆಡೆಟ್ ಸೋಹಮ್, ನಿಷ್ಪಕ್ಷಪಾತವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆಯೊಂದಿಗೆ, ಶಾಲಾ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಹಾಗೂ ಪ್ರಾಮಾಣಿಕತೆಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವ ಕುರಿತು ಎಲ್ಲ ತಂಡಗಳ ನಾಯಕರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಕ್ಯಾಪ್ಟನ್ ಯೋಗೇಶ, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕಾ್ವಡರ್ನ್ ಲೀಡರ್ ಮೊಹಮ್ಮದ್ ಷಾಜಿ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.












