ಮಡಿಕೇರಿ ಡಿ.12 NEWS DESK : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ವಿಡಿಯೋವನ್ನು ವೈರಲ್ ಮಾಡಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಕ್ಷಾತೀತ, ನಿಷ್ಪಕ್ಷಪಾತ ಮತ್ತು ಸೌಹಾರ್ದತೆಯ ಆದರ್ಶದೊಂದಿಗೆ ಸಂವಿಧಾನಬದ್ಧವಾಗಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರನ್ನು ಅಪಮಾನಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಬಂದ ನಂತರ ದೇಶದ ಅಲ್ಪಸಂಖ್ಯಾತರು ಶೈಕ್ಷಣಿಕ, ಸಾಮಾಜಿಕ, ವ್ಯವಹಾರಿಕ ಮತ್ತು ಆರ್ಥಿಕವಾಗಿ ಸಬಲರಾಗಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಪ್ರತಿ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. ಇದರ ಲಾಭವನ್ನು ಪಡೆದ ಅಲ್ಪಸಂಖ್ಯಾತರು ಮೋದಿ ಅವರ ಸರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಹೊಂದಿದ್ದಾರೆ. ಆದರೆ ಕೆಲವು ದೇಶದ್ರೋಹಿ ಕಿಡಿಗೇಡಿಗಳು ವಿಶ್ವಶ್ರೇಷ್ಠ ಮೋದಿಯವರನ್ನು ನಿರಂತರವಾಗಿ ಅವಮಾನಿಸುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಸರಕಾರದಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಿಲ್ಲ, ಬದಲಿಗೆ ಎಲ್ಲರಿಗೂ ಅನುಕೂಲವಾಗಿದೆ ಮತ್ತು ದೇಶ ಪ್ರಗತಿಯತ್ತ ಸಾಗುತ್ತಿದೆ. ಮೋದಿ ಅವರ ಆಡಳಿತವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ, ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಿದೆ. ಇದನ್ನು ಸಹಿಸದ ದೇಶದ್ರೋಹಿಗಳು ಅಶಾಂತಿ ಸೃಷ್ಟಿಸುವುದಕ್ಕಾಗಿ ಷಡ್ಯಂತ್ರಗಳನ್ನು ನಡೆಸುತ್ತಿವೆ. ಆದ್ದರಿಂದ ಮಡಿಕೇರಿ ನಗರದ ಸ್ಪೈಸಸ್ ಅಂಗಡಿಯ ಯುವಕರ ಗುಂಪು ನಡೆಸಿದ ಕುಕೃತ್ಯವನ್ನು ಪೊಲೀಸರು ಲಘುವಾಗಿ ಪರಿಗಣಿಸದೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ. ಪ್ರಧಾನಿಯನ್ನು ಅವಹೇಳನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ವಿಫಲವಾದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.











