ಮಡಿಕೇರಿ ಡಿ.15 NEWS DESK : ಕ್ರೀಡೆಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಮತ್ತು ನಾಯಕತ್ವದ ಗುಣವನ್ನು ಸೃಷ್ಟಿಸುತ್ತವೆ ಎಂದು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ತಿಳಿಸಿದ್ದಾರೆ. ಕೊಡಗು ಸೈನಿಕ ಶಾಲೆಯಲ್ಲಿ ನಡೆದ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೋರಿದ ಉನ್ನತ ಮಟ್ಟದ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಕನಿಷ್ಠ ಪ್ರಶಂಸನೀಯ. ಕ್ರೀಡಾಕೂಟದ ಆಯೋಜಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ. ಕ್ರೀಡಾಕೂಟದುದ್ದಕ್ಕೂ ಸುರಕ್ಷತೆ ಮತ್ತು ನ್ಯಾಯಸಮ್ಮತ ಆಟಕ್ಕೆ ಆದ್ಯತೆ ನೀಡಲಾಗಿತ್ತು ಎಂದು ಹೇಳಿದರು. ಬಾಲಕಿಯರ ಹಿರಿಯರ ವಿಭಾಗದಿಂದ ಸುಬ್ರತೋ ನಿಲಯದ ಕೆಡೆಟ್ ದೀಪ್ತಿದೇವಿ ಹಾಗೂ ಕಿರಿಯ ಬಾಲಕಿಯರ ವಿಭಾಗದಿಂದ ಕಟಾರಿ ಕಿರಿಯರ ನಿಲಯದ ಕೆಡೆಟ್ ಕನಿಷ್ಠ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಕ್ರೀಡಾಕೂಟದ ಎಲ್ಲಾ ವಿಭಾಗಗಳಲ್ಲಿ ಸ್ಮರಣೀಯವಾದ ಸಾಧನೆಗೈದ ಸುಬ್ರತೋವನ್ನು 2025ನೇ ಸಾಲಿನ ಚಾಂಪಿಯನ್ ನಿಲಯವನ್ನಾಗಿ ಘೋಷಿಸಲಾಯಿತು. ವಿವಿಧ ವಿಭಾಗಗಳ ಓಟದ ಸ್ಪರ್ಧೆ, ಹಗ್ಗಜಗ್ಗಾಟದ ಸ್ಪರ್ಧೆ ಮತ್ತು ಮನೋರಂಜನಾ ಸ್ಪರ್ಧೆಗಳು ಗಮನ ಸೆಳೆದವು. ಅದ್ಭುತ ಸಾಧನೆಗೈದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಹಿರಿಯರ ಬಾಲಕರ ವಿಭಾಗದಲ್ಲಿ ಸುಬ್ರೋತೋ ನಿಲಯದ ಕೆಡೆಟ್ ಪ್ರಮೋದ್ ಹಾಗೂ ಅದೇ ನಿಲಯದ ಕಿರಿಯರ ವಿಭಾಗದ ಕೆಡೆಟ್ ಲಾಲಿತ್ಯ, ನಂತರ ಶಾಲೆಯ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದ ಪಥಸಂಚಲನವನ್ನು ಶಿಸ್ತುಬದ್ಧವಾಗಿ ನಡೆಸಿಕೊಟ್ಟರು. ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ದಿವ್ಯಾ ಸಿಂಗ್, ಶಾಲಿನಿ ರಾವ್ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆಡೆಟ್ ಶ್ರೇಯ ಸ್ವಾಗತಿಸಿ, ಮಯೂರ ವಂದಿಸಿದರು.











