
ಮಡಿಕೇರಿ ಡಿ.15 NEWS DESK : ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮಾದರಿಯಲ್ಲಿ “ಕೊಡವಲ್ಯಾಂಡ್” ಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಡಿ.18ರಂದು ಗನ್ ಕಾರ್ನಿವಲ್ ತೋಕ್ ನಮ್ಮೆ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು 16ನೇ ವಾರ್ಷಿಕ ಸಾರ್ವಜನಿಕ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಮೂರ್ನಾಡ್ ನ ಬಲಂಬೇರಿ ರಸ್ತೆಯ ಬಳಿ ಕಡಿಯತ್ನಾಡ್ ಗಡಿರೇಖೆಯ ಸಮೀಪ ಚೇನಂಡ ಪೃಥ್ವಿ ಅವರ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ ನಲ್ಲಿ ಜಾನಪದ ಸಂಭ್ರಮ ಮತ್ತು ಉತ್ಸಾಹದೊಂದಿಗೆ ಆಚರಿಸಲಾಗುತ್ತಿದೆ. ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ, ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಕೊಡವರು, ಕೊಡವತಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಬಂದೂಕು ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆ, ಹಳೆಯ ಸಂಪ್ರದಾಯದ ಆಚರಣೆಗಳು, ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಮತ್ತು ಸಂರಕ್ಷಿಸಲು ಪ್ರತಿ ವರ್ಷ ಸಿಎನ್‍ಸಿ ತೋಕ್ ನಮ್ಮೆ ಗನ್ ಕಾರ್ನಿವಲ್ ಅನ್ನು ಆಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಗುರುವಾರ ನಡೆಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಸರ್ವ ಕೊಡವರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಗನ್ ಸಹಿತ ಹಾಜರಾಗುವಂತೆ ಕೋರಿದ್ದಾರೆ.









