
ಮಡಿಕೇರಿ ಡಿ.15 NEWS DESK : ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕೇಂದ್ರ್ರ ಕಾಫಿ ಮಂಡಳಿಯ ಆಶ್ರಯದಲ್ಲಿ ಡಿ.20ರಿಂದ 22 ರವರೆಗೆ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ ಸಮಾರಂಭ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ಸರ್ಕಾರದ ಕೇಂದ್ರ್ರ ಕಾಫಿ ಮಂಡಳಿಯ ನಿರ್ದೇಶಕ ತಳೂರು ಕಿಶೋರ್ ಕುಮಾರ್ ಅವರು ಶತಮಾನೋತ್ಸವ ಸಮಾರಂಭವನ್ನು ಡಿ.20ರಂದು ಕೇಂಧ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಶ್ ಗೋಯಲ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರ ಸ್ವಾಮಿ, ಕೇಂದ್ರ ವಾಣಿಜ್ಯ ಸಚಿವರಾದ ಜತಿನ್ ಪ್ರಸಾದ್, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಸಂಸದರುಗಳಾದ ಕೋಟಾ ಶ್ರೀನಿವಾಸ ಪೂಜಾರಿ, ಯದುವೀರ್ ಒಡೆಯರ್, ಕಾಫಿ ಮಂಡಳಿ ಅಧ್ಯಕ್ಷರಾದ ವಿ.ಜಿ.ದಿನೇಶ್ ಹಾಗೂ ಚಿಕ್ಕಮಗಳೂರು ಮತ್ತು ಕೊಡಗಿನ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. *ಘೋಷವಾಕ್ಯ* ಅರೇಬಿಯಾ ದೇಶದಿಂದ ಬಾಬಾ ಬುಡನ್ ಸೂಫಿ ಸಂತರು ತಂದ ಏಳು ಕಾಫಿ ಬೀಜಗಳಿಂದ ಈ ವಿಭಾಗದಲ್ಲಿ ಕಾಫಿ ಕೃಷಿ ಆರಂಭಗೊಂಡಿತೆನ್ನುವ ನಂಬುಗೆಗಳಿವೆ. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭವು ‘ಕಾಫಿಯ ಅದ್ಭುತ ಭವಿಷ್ಯಕ್ಕೆ 7 ಚಿನ್ನದ ಬೀಜಗಳು’ ಘೋಷವಾಕ್ಯದಡಿ ನಡೆಯಲಿದೆ. ಮುಂದಿನ 2047ರ ಒಳಗಾಗಿ ಭಾರತದ ಕಾಫಿ ಉತ್ಪಾದನೆಯ ಗುರಿ 7 ಕೋಟಿ ಟನ್ ಎನ್ನುವ ಅಂಶವನ್ನು ಘೋಷ ವಾಕ್ಯ ಪ್ರತಿನಿಧಿಸುತ್ತದೆ ಎಂದರು. ಮೂರು ದಿನಗಳ ಕಾಲ ಹತ್ತು ಅಧಿವೇಶನಗಳು ಮತ್ತು ಕಾರ್ಯಾಗಾರಗಳು ನಡೆಯಲಿವೆ. ತಂತ್ರಜ್ಞಾನದ ಮೂಲಕ ತೋಟಗಳ ನಿರ್ವಹಣೆಯ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಫಿಗೆ ಸಂಬಂಧಿಸಿದ 40 ಮಳಿಗೆಗಳು ಗಮನ ಸೆಳೆಯಲಿರುವುದಾಗಿ ತಿಳಿಸಿದರು. *ನೂತನ ತಳಿಗಳ ಬಿಡುಗಡೆ* ಶತಮಾನೋತ್ಸವ ಸಮಾರಂಭದಲ್ಲಿ ‘ಸೆಲೆಕ್ಷನ್-14’ ಎನ್ನುವ ಬಿಳಿ ಕಾಂಡಕೊರಕ ನಿರೋಧಕ ಅರೇಬಿಕಾ ತಳಿಯನ್ನು ಹಾಗೂ ‘ಸೆಲೆಕ್ಷನ್-15’ ಎನ್ನುವ ರಸ್ಟ್ ನಿರೋಧಕ ಮತ್ತು ಅರೆ ಗಿಡ್ಡ ಜಾತಿಯ ಅರೇಬಿಕಾ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಳೂರು ಕಿಶೋರ್ ಕುಮಾರ್ ಹೇಳಿದರು. *100 ಬೆಳೆಗಾರರಿಗೆ ಸನ್ಮಾನ* ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಗಳ 100 ಕಾಫಿ ಬೆಳೆಗಾರರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಕೊಡಗಿನ ಸುಂಟಿಕೊಪ್ಪದ ಬೋಸ್ ಮಂದಣ್ಣ, ಸೋಮವಾರಪೇಟೆಯ ಸಾಕಮ್ಮ, ಗುಂಡುಕುಟ್ಟಿ ತೋಟದ ಮಂಜುನಾಥ್, ಪಾಲಿಬೆಟ್ಟದ ಅಪ್ಪಯ್ಯ, ಶ್ರೀಮಂಗಲದ ಡಾಲಿ ಚಂಗಪ್ಪ, ಕುಟ್ಟದ ಬೊಳೇರ ಚಂಗಪ್ಪ ಅವರನ್ನು ಹಾಗೂ ಜಿಲ್ಲೆಯ ಇನ್ನು ಕೆಲವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು. *50 ಸಾವಿರ ಮಂದಿ* ಸಮಾರಂಭದಲ್ಲಿ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಕೇರಳ ತಮಿಳುನಾಡು, ಒಡಿಸಾ, ಈಶಾನ್ಯ ರಾಜ್ಯದ 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು. ಭಾರತಲ್ಲಿ ಪ್ರಸ್ತುತ ಉತ್ಪಾದನೆಯಾದ 3.60 ಲಕ್ಷ ಮೆಟ್ರಿಕ್ ಟನ್ ಕಾಫಿಯಲ್ಲಿ 2.30 ಲಕ್ಷ ಮೆ.ಟ. ಕಾಫಿಯನ್ನು ರಫ್ತು ಮಾಡುವ ಮೂಲಕ 15 ಸಾವಿರ ಕೊಟಿ ವಿದೇಶಿ ವಿನಿಮಯ ಲಭ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಫಿ ಮಂಡಳಿಯ ಮಡಿಕೇರಿಯ ಸಹಾಯಕ ವಿಸ್ತರಣಾಧಿಕಾರಿಗಳಾದ ಕೆ.ಪಿ.ಸನೀಶ್ ಹಾಗೂ ಎಂ.ಸಜಿನ ಉಪಸ್ಥಿತರಿದ್ದರು.









