ಮಡಿಕೇರಿ ಡಿ.15 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2ನೇ ವರ್ಷದ ಕೊಡಗು ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೀಂ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯಾಟದಲ್ಲಿ ಟೀಂ ಸ್ಮ್ಯಾಶರ್ಸ್, ಟೀಂ ಚೀತಾ, ಟೀಮ್ ಫ್ಲೈಯರ್ಸ್, ಟೀಂ ಜಂಪರ್ಸ್, ಟೀಂ ಹಂಟರ್ಸ್ ಮತ್ತು ಟೀಂ ಬ್ಲಾಕರ್ಸ್ ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ 4 ತಂಡಗಳು ಕ್ವಾಲಿಫಯರ್ ಹಂತಕ್ಕೆ ಪ್ರವೇಶ ಪಡೆಯಿತು. ಮೊದಲ ಕ್ಲಾಲಿಫೈಯರ್ ಪಂದ್ಯಾಟದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ಟೀಂ ಸ್ಮ್ಯಾಶರ್ಸ್ ತಂಡ 26-24 ಪಾಯಿಂಟ್‌ಗಳಿಂದ ಅಕ್ಷಯ್ ನಾಯಕತ್ವದ ಟೀಂ ಫ್ಲೈಯರ್ಸ್ ತಂಡವನ್ನು ಮಣಿಸಿತು. ನಂತರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪ್ರೇಮ್ ನಾಯಕತ್ವದ ಟೀಂ ಚೀತಾ ತಂಡ 25-19 ಪಾಯಿಂಟ್‌ಗಳಿಂದ ಆದರ್ಶ್ ನಾಯಕತ್ವದ ಟೀಂ ಜಂಪರ್ಸ್ ತಂಡವನ್ನು ಮಣಿಸಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರೇಮ್ ನಾಯಕತ್ವದ ಟೀಂ ಚೀತಾ ತಂಡ 25-27 ಪಾಯಿಂಟ್‌ಗಳಿಂದ ಅಕ್ಷಯ್ ನಾಯಕತ್ವದ ಟೀಂ ಫ್ಲೈಯರ್ಸ್ ತಂಡವನ್ನು ಮಣಿಸಿತು. ಫೈನಲ್ ಪಂದ್ಯದಲ್ಲಿ ಟೀಂ ಸ್ಮ್ಯಾಶರ್ಸ್ ತಂಡ 2-1 ಸೆಟ್‌ಗಳಿಂದ ಟೀಂ ಚೀತಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಂ ಚೀತಾ ತಂಡ ದ್ವಿತೀಯ ಸ್ಥಾನ ಪಡೆದರೆ, ಟೀಂ ಫ್ಲೈಯರ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಟೀಂ ಸ್ಮ್ಯಾಶರ್ಸ್ ತಂಡದ ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರೆ, ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಟೀಂ ಫ್ಲೈಯರ್ಸ್ ತಂಡದ ಚೈತನ್ಯ ಚಂದ್ರಮೋಹನ್ ಪಡೆದುಕೊಂಡರು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದನ್ನು ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಮತ್ತು ವಾಲಿಬಾಲ್ ಆಟಗಾರ ಧವನ್, ಸ್ಕೋರರ್ ಆಗಿ ಬಾಚರಣಿಯಂಡ ಶಶಾಂಕ್ ಸೋಮಯ್ಯ ಕಾರ್ಯನಿರ್ವಹಿಸಿದರು. :: ಉದ್ಘಾಟನಾ ಸಮಾರಂಭ : : 2ನೇ ವರ್ಷದ ಜಿಲ್ಲಾ ಮಟ್ಟದ ಪತ್ರಕರ್ತರ ವಾಲಿಬಾಲ್ ವೈಭವವನ್ನು ಉದ್ಘಾಟಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇ.ಬಿ.ರಾಘವ್, ಆರ್ಥಿಕ ತಾರತಮ್ಯ, ಮತೀಯ ವ್ಯತ್ಯಾಸವನ್ನು ಹೋಗಲಾಡಿಸಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ. ದೃಢತೆ, ಸಂಕಲ್ಪ, ಸಹನೆ, ದೈರ್ಯವನ್ನು ಹೆಚ್ಚಿಸುತ್ತದೆ. ಕ್ರೀಡಾಕೂಟಗಳು ಮನಸ್ಸಿನ ಒತ್ತಡವನ್ನು ನಿವಾರಿಸಿ ಉಲ್ಲಾಸ ನೀಡುತ್ತದೆ. ಸೋಲನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಲು ಮನೋಧೈರ್ಯ ನೀಡುತ್ತದೆ. ಕ್ರೀಡಾಪಟುಗಳಿಗೆ ಶಿಸ್ತು ಅತೀ ಮುಖ್ಯ ಎಂದರು. ಕುಶಾಲನಗರ ತಾಲೂಕಿನ ಹೇರೂರು ಗ್ರಾಮದ ಉದ್ಯಮಿ ಮೋಹಿನಿ ಪ್ರಕಾಶ್ ಮಾತನಾಡಿ, ಕ್ರೀಡೆಯು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕ್ರೀಡಾಪಟುಗಳು ಜನರಿಂದ ಹೆಚ್ಚು ಪ್ರೀತಿ ಗಳಿಸುತ್ತಾರೆ. ಪತ್ರಿಕಾ ಮಾಧ್ಯಮಗಳು ಕ್ರೀಡಾ ಕ್ಷೇತ್ರದ ಬಗ್ಗೆಯೂ ಹೆಚ್ಚು ಬೆಳಕು ಚೆಲ್ಲುವಂತಾಗಬೇಕು ಎಂದರು. ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಸಲಹೆಗಾರ ಹಾಗೂ ಎಸ್‌ಎನ್‌ಡಿಪಿ ಮಡಿಕೇರಿ ತಾಲೂಕು ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿ, ಹೆಸರಿಗೆ ತಕ್ಕಂತೆ ಪಂದ್ಯಾವಳಿ ವೈಭವಯುತವಾಗಿದೆ. ದುರ್ಬಲರು, ಎಲೆಮರೆ ಕಾಯಂತಿರುವವರನ್ನು ಬೆಳಕಿಗೆ ತರುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತಿದೆ. ಸಮಾಜದ ಸರಿತಪ್ಪುಗಳನ್ನು ಮಾಧ್ಯಮದಲ್ಲಿ ನಿರ್ಭಯವಾಗಿ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದು, ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಪತ್ರಕರ್ತರು ಕೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ವೇದಿಕೆಯಲ್ಲಿ ಪಂದ್ಯಾವಳಿ ಸಂಚಾಲಕರಾದ ಲೋಕೇಶ್ ಕಾಟಕೇರಿ, ಶಿವ ಕಾಂತರಾಜು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ ಸ್ವಾಗತಿಸಿದರೆ, ಸದಸ್ಯ ದಿನೇಶ್ ಮಾಲಂಬಿ ವಂದಿಸಿದರು. :: ಸಮಾರೋಪ ಸಮಾರಂಭ :: ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೊಡಗು ಅಭಿವೃದ್ದಿ ಸಮಿತಿ ಸ್ಥಾಪಕಾಧ್ಯಕ್ಷ ಪ್ರಸನ್ನ ಭಟ್, ಪ್ರತಿನಿತ್ಯ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡೆಯಿಂದ ವಿಶ್ರಾಂತಿ ಸಿಗುತ್ತದೆ. ಸಂಕಷ್ಟದ ಸಮಯದಲ್ಲಿ ಪತ್ರಕರ್ತರ ನೆರವಿಗೆ ಕೊಡಗು ಅಭಿವೃದ್ಧಿ ಸಮಿತಿ ಸದಾ ಇರುತ್ತದೆ ಎಂದರು. ಜೀವ ವಿಮಾ ನಿಗಮದ ಸಹಾಯಕರಾದ ಬೊಮ್ಮುಡಿ ಮೋಹಿತ್ ಮಾತನಾಡಿ, ಪತ್ರಕರ್ತರಿಗೆ ಅಗತ್ಯ ಸಹಕಾರ ನೀಡಲು ಸಿದ್ಧ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಆಟ ಗೊತ್ತಿಲ್ಲದವರೂ ಕ್ರೀಡೆಯಲ್ಲಿ ಪಾಲ್ಗೊಂಡು ಹೊಸ ಅನುಭವ ಪಡೆಯಬೇಕು. ಸಂಘಟನೆಗೆ ಕ್ರೀಡೆಯ ಕೊಡುಗೆ ಹೆಚ್ಚಿರುತ್ತದೆ. ಪ್ರೆಸ್‌ಕ್ಲಬ್‌ನಿಂದ ಮುಂದೆಯೂ ಪರಿಣಾಮಕಾರಿ ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿ, ಜಿಲ್ಲೆಯ ಮೂಲೆ ಮೂಲೆಯ ಪತ್ರಕರ್ತರು ಒಂದೆಡೆ ಸೇರಲು ಕ್ರೀಡಾಕೂಟಗಳೇ ಕಾರಣ. ಕ್ರೀಡೆ ಪತ್ರಕರ್ತರ ನಡುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನುಕಾರ್ಯಪ್ಪ ಮಾತನಾಡಿ, ಉತ್ತಮ ಆರೋಗ್ಯ ಹೊಂದಿದ್ದರೆ ಉತ್ಸಾಹದಿಂದ ಕೆಲಸ ಮಾಡಬಹುದು. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದರು.
ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಬಿ.ಜಿ.ಮಂಜು, ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್, ಸದಸ್ಯ ಜೈರುಸ್ ಥೋಮಸ್ ಅಲೆಗ್ಸಾಂಡರ್, ಪಂದ್ಯಾವಳಿ ಸಂಚಾಲಕ ಅಕ್ಷಯ್ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಸುನಿಲ್ ಪೊನ್ನೇಟಿ ಸ್ವಾಗತಿಸಿ, ಸಂಘದ ನಿದೇರ್ಶಕ ಆನಂದ್ ಕೊಡಗು ವಂದಿಸಿದರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.











