ವಿರಾಜಪೇಟೆ ಡಿ.17 NEWS DESK : ಜನಸಾಮಾನ್ಯರು ಹಾಗೂ ರೈತರ ಸಮಸ್ಯೆಗಳನ್ನು ಅರಿತು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟಗಳನ್ನು ರೂಪಿಸಲು ಸಿಪಿಐ(ಎಂ) ಪಕ್ಷ ಮುಂದಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಹೆಚ್.ಬಿ.ರಮೇಶ್ ತಿಳಿಸಿದರು. ವಿರಾಜಪೇಟೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ಡಿ.21ರಂದು ಹಮ್ಮಿಕೊಂಡಿರುವ ಹೋರಾಟದ ಕುರಿತು ಡಿ.15ರ ವರೆಗೆ ಮನೆ ಮನೆಗೆ ಭೇಟಿ ಮತ್ತು ಸಹಿ ಸಂಗ್ರಹ ಕಾರ್ಯಕ್ರಮ ಮಾಡಲಾಗಿದೆ. ಜನಸಾಮಾನ್ಯರು, ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಮುಂದೆ ಇಡಬೇಕು ಎಂದು ಪಕ್ಷ ತೀರ್ಮಾನಿಸಿದೆ. ಡಿ.21 ರಂದು 50 ಸಾವಿರಕ್ಕೂ ಹೆಚ್ಚು ಜನರು ಸೇರಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಬಹಿರಂಗ ಸಭೆ ಮೂಲಕ ಸರಕಾರಕ್ಕೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಕಾಫಿ ಬೆಳೆಯುವ ಕೊಡಗಿನಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಜಿಲ್ಲೆಯ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಕೊಡಗು ಜಿಲ್ಲೆಗೆ ರೈಲು ಅವಶ್ಯಕತೆ ಇದ್ದು, ಶೀಘ್ರದಲ್ಲಿ ಕೇಂದ್ರ ಸರಕಾರ ಇದನ್ನು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರ ಬಂಡವಾಳ ಶಾಹಿಗಳ ಪಕ್ಷವಾಗಿದೆ. ರೈತರ, ಕೂಲಿಕಾರ್ಮಿಕರ, ಬಡವರ, ದಿನ ದಲಿತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ದೇಶದ ಬಹುಸಂಖ್ಯಾತರನ್ನು ವಂಚಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬಡವರ ಪಾಲಿಗೆ ಹಿಡಿ ಶಾಪವಾಗಿದೆ. ದಿನ ಬಳಕೆ ವಸ್ತುಗಳು, ಕೃಷಿ ಚಟುವಟಿಕೆ ವಸ್ತುಗಳು ದುಬಾರಿ ಮಾಡಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐಎಂ ಪಕ್ಷ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನ ನೀಡಿದ ಪಕ್ಷವಾಗಿದೆ. ಬಡವರ, ಕೂಲಿ ಕಾರ್ಮಿಕರ, ದಿನ ದಲಿತರ ಪಕ್ಷವಾಗಿದೆ. ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಅನಿವಾರ್ಯ. ಹೀಗಾಗಿ ಮನೆ ಮನೆ ಭೇಟಿ ನೀಡಿ ಸಹಿ ಸಂಗ್ರಹಿಸಿ ಜನಾಂದೋಲನಾ ನಡೆಸಲಾಗುತ್ತಿದೆ ಎಂದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಭರತ್ ಪಿ.ಆರ್ ಮಾತನಾಡಿ, ಕಳೆದ 20 ದಿನಗಳಿಂದ ಮನೆಮನೆ ಭೇಟಿ ನೀಡಿ ಸಾವಿರಾರು ಸಹಿ ಸಂಗ್ರಹ ಮಾಡಿ ಕರಪತ್ರಗಳನ್ನು ಹಂಚಲಾಗಿದೆ. ಸಾಮಾಜಿಕ ನ್ಯಾಯ, ಸಮಾನತೆ, ಮಹಿಳೆ, ಅಲ್ಪಸಂಖ್ಯಾತರು, ಖಾಸಗಿಕರಣ, ಕೋಮುವಾದ, ರೇಷನ್ ವ್ಯವಸ್ಥೆ, ದಲಿತ ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಜನಸಾಮಾನ್ಯರನ್ನು ಭಾದಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕು, ಜನಸಾಮಾನ್ಯರ ಬೇಡಿಕೆಗಳನ್ನು ಗಮನದಲ್ಲಿಟ್ಟು ಅಭಿವೃದ್ದಿಯೋಜನೆಗಳನ್ನು ರೂಪಿಸಬೇಕು ಎಂಬ ಆಗ್ರಹದೊಂದಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಕೈಗಾರಿಕೆಗಳು, ಕೃಷಿ, ಸಂಬಂಧಿಸಿ ಸ್ಥಳೀಯ ಜನತೆಯ ಹಿತಾಸಕ್ತಿಗಳನ್ನು ಎತ್ತಿಹಿಡಿಯಬೇಕು, ಆರೋಗ್ಯ ರಂಗದಲ್ಲಿ ಪಿ.ಪಿ.ಪಿ ಮಾದರಿಗೆ ಅವಕಾಶ ನೀಡಬಾರದು, ಶ್ರಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದು ಸೇರಿದಂತೆ ಸೇವೆಗಳ ಖಾಸಗೀಕರಣ ತಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನಾ ಬಹಿರಂಗ ಸಭೆ ನಡೆಯಲಿದೆ. ಎಲ್ಲ ದುಡಿಯುವ ಕೈಗಳು ಸಹಕಾರ ನೀಡಿ ಬಹಿರಂಗ ಸಭೆಯಲ್ಲಿ ಭಾಗವಹಿಸಬೇಕು ಎಂದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಎ.ಸಿ.ಸಾಬು ಮಾತನಾಡಿ, ಅಸಂಘಟಿತ ಕಾರ್ಮಿಕರ ಶೋಷಣೆಗೆ ಕಡಿವಾಣ ಹಾಕುವುದು ಮುಂತಾದ ವಿಷಯಗಳ ಜೊತೆಗೆ, ಅಭಿವೃದ್ದಿ ಎಂಬುದು ಸಮಾಜದ ಮೇಲ್ಪದರದಲ್ಲಿರುವ ಜನಗಳಿಗಷ್ಟೆ ಸೀಮಿತವಾಗದೆ ಸಮಸ್ತ ಜನವಿಭಾಗಗಳನ್ನು ಒಳಗೊಳ್ಳುವಂತೆ ಯೋಜನೆಗಳನ್ನು ರೂಪಿಸಬೇಕು ಎಂಬ ಆಗ್ರಹದೊಂದಿಗೆ ಸಿಪಿಐಎಂ ಪಕ್ಷವು ಬಹಿರಂಗ ಸಭೆ ಹಮ್ಮಿಕೊಂಡಿದೆ. ಶಿಕ್ಷಣ, ಆರೋಗ್ಯದ ಲಾಭಿಗಳು, ರಿಯಲ್ ಎಸ್ಟೇಟ್ ಮುಂತಾದ ದೊಡ್ಡ ಉದ್ಯಮಿಗಳ ಪರವಾಗಿ ಆಳುವ ವರ್ಗ ರೂಪಿಸುತ್ತಿರುವ ಇಂದಿನ ಏಕಪಕ್ಷೀಯ ಅಭಿವೃದ್ಧಿಗೆ ಪರ್ಯಾಯವಾದ ಕಣ್ಣೋಟದೊಂದಿಗೆ, ಜನ ಸಾಮಾನ್ಯರ ಬದುಕು ಉತ್ತಮಗೊಳಿಸುವ ಉದ್ದೇಶದೊಂದಿಗೆ ನಡೆಯುತ್ತಿರುವ ಈ ಜನಾಗ್ರಹ ಕಾರ್ಯಕ್ರಮವನ್ನು ಜಿಲ್ಲೆಯ ಜನತೆ ಬೆಂಬಲಿಸಬೇಕು ಎಂದು ಹೇಳಿದರು. ಈ ಸಂದರ್ಭ ಸಿಪಿಐ(ಎಂ)ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಪದ್ಮಿನಿ ಶ್ರೀಧರ್ ಸೇರಿದಂತೆ ಇತರರು ಇದ್ದರು.











