ಮೈಸೂರು ಡಿ.17 NEWS DESK : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಡಿಸೆಂಬರ್ 18ರಿಂದ ಮೂರು ದಿನಗಳ ಕಾಲ “ಆಸ್ಪೈರಿಂಗ್ ಮೈಸೂರು” ಎಂಬ ಮೆಗಾ ಪ್ರದರ್ಶನ ನಡೆಯಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಈ ಮೆಗಾ ಪ್ರದರ್ಶನ ಆಯೋಜನೆಗೊಂಡಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ವಿಕಸಿತ ಭಾರತ 2047 ಕುರಿತು ಜಾಗೃತಿ, ನಾವೀನ್ಯತೆ ಹಾಗೂ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಈ ಬೃಹತ್ ಪ್ರದರ್ಶನ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಆಯೋಜಕರಾದ ವನೀಶ ಗುಪ್ತಾ, ಮೈಸೂರಿನ ನಾಗರಿಕರಿಗೆ ಇದೊಂದು ಸಮೃದ್ಧ ಮತ್ತು ಸಂವಾದಾತ್ಮಕ ವೇದಿಕೆಯಾಗಲಿದೆ ಎಂದರು. ವಿಜ್ಞಾನ-ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಆರೋಗ್ಯ, ಬಂದರು, ಗಣಿಗಾರಿಕೆ, ಕರಕುಶಲ, ಜವಳಿ ಕ್ಷೇತ್ರದಲ್ಲಿನ ಪ್ರಗತಿ, ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ದೊರೆಯಲಿದೆ. ಮೂರು ದಿನಗಳ ಕಾಲ ಈ ಬೃಹತ್ ಪ್ರದರ್ಶನ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪ್ರವೇಶ ಉಚಿತವಾಗಿದೆ.











