
ಮಡಿಕೇರಿ NEWS DESK ಡಿ.19 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಡಿ.23 ರಿಂದ 28 ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿ ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ವಿವಿಧ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು. ಡಿ.23 ರಂದು ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ ಮತ್ತು ಧ್ವಜಾರೋಹಣ, ಡಿ.24 ಮತ್ತು 25 ರಂದು ನೈರ್ಮಲ್ಯ ಬಲಿ, ಧ್ವಜಸ್ತಂಭ ಪೂಜೆ, ಭೂತಬಲಿ ಹಾಗೂ ಮಹಾಪೂಜೆ ಜರುಗಲಿದೆ.
ಡಿ.26 ರಂದು ತುಲಭಾರ ಸೇವೆ, ಧ್ವಜಸ್ತಂಭ ಪೂಜೆ, ನೃತ್ಯ ಬಲಿ, ವಸಂತ ಪೂಜೆ, ದೇವರ ಶಯನೋತ್ಸವ ಮತ್ತು ಮಹಾಪೂಜೆ ನಡೆಯಲಿದೆ. ಡಿ.27 ರಂದು ಕವಟ ಪೂಜೆ, ತೈಲಾಭ್ಯಂಜನ, ಪಂಚಭೂತ ಅಭಿಷೇಕ, ಧ್ವಜಸ್ತಂಭ ಪೂಜೆ, ದೇವರು ಜಳಕಕ್ಕೆ ಹೊರಡುವುದು, ದೇವಾಲಯದ ಆವರಣದಲ್ಲಿ ನೃತ್ಯ ಬಲಿ, ನಡೆ ಭಂಡಾರ, ಧ್ವಜಾರೋಹಣ ಮತ್ತು ಮಹಾಪೂಜೆ ಜರುಗಲಿದೆ. ಜಾತ್ರಮಹೋತ್ಸವದ ಕೊನೆಯ ದಿನವಾದ ಡಿ.28 ರಂದು ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಮಂತ್ರಾಕ್ಷತೆ ವಿತರಣೆಯಾಗಲಿದೆ. ಜಾತ್ರಾ ಮಹೋತ್ಸವದ ಆರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇರುತ್ತದೆ ಎಂದು ಶಶಿ ಜನಾರ್ಧನ ತಿಳಿಸಿದರು. ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ಜಾತಿ, ಜನಾಂಗದ ಭಕ್ತರು ಸೇರಿದಂತೆ ಕ್ರೈಸ್ತರು, ಮುಸಲ್ಮಾನ ಬಾಂಧವರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯದರ್ಶಿ ಕಾಶಿ ಕಾರ್ಯಪ್ಪ ಅವರು ಮಾತನಾಡಿ, ಜಾತ್ರಾ ಮಹೋತ್ಸವದ ಹಿನ್ನೆಲೆ ಆರು ದಿನಗಳಿಗೆ ಸೀಮಿತವಾಗಿ ಕೆಲವು ಕಟ್ಟುಪಾಡುಗಳನ್ನು ಜಾರಿಗೆ ತರಲಾಗಿದೆ. ದೇವರ ಜಳಕ, ದೇವರ ಬಲಿ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸಂದರ್ಭ ಗರ್ಭಗುಡಿಗೆ ತಂತ್ರಿಗಳು ಹಾಗೂ ಅರ್ಚಕರನ್ನು ಹೊರತು ಪಡಿಸಿದಂತೆ ಇತರರಿಗೆ ಪ್ರವೇಶ ಇರುವುದಿಲ್ಲ. ದೇವರ ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡಚಣೆ ಇಲ್ಲದೆ ಶ್ರದ್ಧಾಭಕ್ತಿಯಿಂದ ನಡೆಯಬೇಕು ಎಂಬ ಉದ್ದೇಶದಿಂದ ಮುಖ್ಯದ್ವಾರದ ಮೂಲಕ ಗರ್ಭಗುಡಿಯ ಪ್ರವೇಶವನ್ನು ನಿರಾಕರಿಸಲಾಗಿದೆ. ಭಕ್ತರು ಮುಖ್ಯ ದ್ವಾರದಿಂದಲೇ ದೇವರ ದರ್ಶನ ಪಡೆಯಬಹುದಾಗಿದೆ. ಗರ್ಭಗುಡಿಯೊಳಗೆ ನಡೆಯುವ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದರು. ಅನ್ನಸಂತರ್ಪಣೆ ಹಾಗೂ ಹೊರೆಕಾಣಿಕೆಗೆ ಸಹಕಾರ ನೀಡುವವರು 9449402305, 9480244642, 9880255064 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಸದಸ್ಯರಾದ ನಂದೇಟಿರ ಗಣಪತಿ, ಅಮ್ಮಂಡ ಮಹೇಶ್, ಬಿ.ಎಸ್.ವೇಣುಗೋಪಾಲ್ ಹಾಗೂ ಮರಾಟಿ ದೇವಪ್ಪ ಉಪಸ್ಥಿತರಿದ್ದರು.










