ಮಡಿಕೇರಿ ಡಿ.19 NEWS DESK : ಇತಿಹಾಸದ ಘಟನೆಗಳನ್ನು ನೆನಪಿಸಿ, ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಲುವಾಗಿ ಯುನೈಟೆಡ್ ಕೊಡವ ಆರ್ಗನೈಸೇಷನ್ ಯುಕೋ ಸಂಘಟನೆಯಿಂದ ’ನೆಪ್ಪ್‌ರ ನಳತ್ ಮಾಂಜತ ಮೊಟ್ಟ್’ (ನೆನಪಿನ ಅಂಗಳದಲ್ಲಿ ಮರೆಯದ ಹೆಜ್ಜೆ) ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯ ಮತ್ತು ಕೊಡಗು ‘ಫ್ಯೂಜನ್ ಆಫ್ ಹಿಸ್ಟರಿ, ಮ್ಯೂಸಿಕ್ ಅಂಡ್ ಪೇಟ್ರಿಯಾಟಿಸಮ್’ ಎಂಬ ಘೋಷವಾಕ್ಯದಲ್ಲಿ ನಗರದ ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವ ನಿಟ್ಟಿನಲ್ಲಿ ಭಾವಚಿತ್ರ ಪ್ರದರ್ಶನ ಗಮನ ಸೆಳೆಯಿತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕೊಡಗಿನ ನೂರಾರು ಹೋರಾಟಗಾರರ ಭಾವಚಿತ್ರವನ್ನು ಕೋಟೆಯೊಳಗೆ ಪ್ರದರ್ಶನಕ್ಕಿಡಲಾಗಿತ್ತು. ಇದರೊಂದಿಗೆ ಹೋರಾಟದ ಸಂದರ್ಭ ಕೊಡಗಿನಲ್ಲಾದ ಘಟನೆಗಳ ಅಪರೂಪದ ಛಾಯಾಚಿತ್ರಗಳು ವೀಕ್ಷಕರಲ್ಲಿ ರೋಮಾಂಚನ ಮೂಡಿಸಿತು. ಅಲ್ಲದೇ ಹೋರಾಟಗಾರರಿಗೆ ನುಡಿ ಹಾಗೂ ಗಾಯನದ ಮೂಲಕ ನಮನ ಸಲ್ಲಿಸಲಾಯಿತು. ಮಲ್ಲೇಂಗಡ ಚಂಗಪ್ಪ, ಪಂದ್ಯಂಡ ಬೆಳ್ಯಪ್ಪ, ಚೆಕ್ಕೆರ ಮೊಣ್ಣಯ್ಯ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಜೀವ ಹಾಗೂ ಜೀವನ ತ್ಯಾಗ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜ.ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕ ಪನ್ನಂಗಾಲತ್ತಮ್ಮೆ ದೇವರ ಹಿನ್ನೆಲೆಯನ್ನು ಪ್ರಸ್ತುತಪಡಿಸಿದರು. ಇದರೊಂದಿಗೆ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಪಾಲೆಯಡ ದಿವ್ಯ, ಮಾಳೇಟಿರ ಅಜಿತ್ ಪೂವಣ್ಣ, ದೇಶಭಕ್ತಿ ಗೀತೆ ಹಾಡಿದರು. ಈ ಸಂದರ್ಭ ಪ್ರಾಸ್ತವಿಕ ಮಾತನಾಡಿದ ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಚಿಣ್ಣಪ್ಪ, ಸುಳ್ಳು ಇತಿಹಾಸ ಸೃಷ್ಟಿಸುವುದು, ನೈಜ ಇತಿಹಾಸ ಮರೆಯುವುದು ದೇಶದ ಅಸ್ಮಿತೆಗೆ ಧಕ್ಕೆ ತರುವ ವಿಷಯ ಎಂದರು. ಸ್ವಾತಂತ್ರ್ಯಕ್ಕಾಗಿ ಕೊಡಗಿನಲ್ಲಿಯೂ ನಿರಂತರ ಹೋರಾಟ ನಡೆಯುತ್ತಿತ್ತು. ಇಂತಹ ಘಟನೆಯನ್ನು ಜನ ಮೆರೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಹಾಗೂ ಅಂತಾರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಅವರು ಮಾತನಾಡಿ, ಕೊಡವ ಜನಾಂಗದಲ್ಲಿ ಪ್ರಸ್ತುತ ಧೈರ್ಯವಂತರು, ವಿಷಯಾಧಾರಿತವಾಗಿ ತಳಮಟ್ಟದಿಂದ ಕೆಲಸ ನಿರ್ವಹಿಸುವ ಜನ-ಸಂಘಟನೆಗಳು ಹಾಗೂ ಇವರ ಪ್ರಯತ್ನಕ್ಕೆ ಆರ್ಥಿಕವಾಗಿ ಸಹಕರಿಸುವವರು ಅಗತ್ಯವಾಗಿದ್ದಾರೆ. ಈ ನಿಟ್ಟಿನಲ್ಲಿ ಜನಾಂಗದವರು ಗಮನ ಹರಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕೂರ್ಗ್ ಹೊಟೇಲ್ ಹಾಗೂ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಪುರಾತತ್ವ ಇಲಾಖೆ ಅಧಿಕಾರಿ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಪುರಾತತ್ವ ಇಲಾಖೆ ಅಧಿಕಾರಿ ಸುನಿಲ್, ಮಲ್ಲೇಂಗಡ ದಿ.ಚಂಗಪ್ಪ ಅವರ ಪುತ್ರರಾದ ಪ್ರಕಾಶ್, ಗಿರೀಶ್, ಜನರಲ್ ತಿಮ್ಮಯ್ಯ ಶಾಲೆ ಪ್ರಾಂಶುಪಾಲೆ ಬಾಳೆಯಡ ಸವಿತಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸೇರದಂತೆ ಮಡಿಕೇರಿ ಕೊಡವ ಸಮಾಜದ ಪ್ರಮುಖರು, ಯುಕೋ ಪ್ರಮುಖರು ಹಾಜರಿದ್ದರು.











