ಬೆಂಗಳೂರು, ಡಿ.20 NEWS DESK : ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗಿ ಬರುವಾಗ ಹೃದಯಾಘಾತದಿಂದ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ (63) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ್ದರು.ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲೇ ಬೊಮಯ್ಯ ಅವರಿಗೆ ಹೃದಯಘಾತವಾಗಿ ನಿಧನರಾಗಿದ್ದಾರೆ. ಮೃತರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಹುಟ್ಟೂರು ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ಅಪಾರವಾದ ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದರು. :: ಸಂತಾಪ :: ಬೊಮ್ಮಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಆನೇಕ ಗಣ್ಯರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸೇರಿದಂತೆ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.











