ಮಡಿಕೇರಿ ಡಿ.23 NEWS DESK : ಮರಗೋಡು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಮರಗೋಡು ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಕಾಲೇಜಿನ ಪಿ.ಜಿ.ಮಾನಸ ಮತ್ತು ಎ.ಮಾನಸ ಪ್ರಥಮ ಸ್ಥಾನ ಪಡೆದು ರೂ.10 ಸಾವಿರ ನಗದು ಬಹುಮಾನ ಮತ್ತು ಆಕರ್ಷಕ ಪಾರಿತೋಷಕ ಪಡೆದರು. ನೆಲ್ಲಿಹುದಿಕೇರಿ ಕಾಲೇಜಿನ ಸಫಾ ಮತ್ತು ಯುಕ್ತ ದ್ವಿತೀಯ ಸ್ಥಾನ ಮತ್ತು ಚೆನ್ನಮ್ಮ ಮಾದಾಪುರ ಕಾಲೇಜಿನ ಸುಕನ್ಯ ಮತ್ತು ರಕ್ಷಾ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯನ್ನು ಪೊಕ್‍ಲಂಡ್ರ ಪ್ರಹ್ಲಾದ್ ಅವರು ನಡೆಸಿಕೊಟ್ಟರು. ರಸಪ್ರಶ್ನೆಯು ಎರಡು ಹಂತದಲ್ಲಿ ನಡೆಯಿತು. ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಅರ್ಹತೆ ಪಡೆದ 8 ತಂಡಗಳಿಗೆ ಮೌಖಿಕ ಪ್ರಶ್ನೋತರದ ಮೂಲಕ ವಿವಿಧ ವಿಷಯಗಳ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳಲ್ಲಿ ಜ್ಞಾನ ಅರಿವನ್ನು ಹೆಚ್ಚಿಸಲು ಪ್ರಯತ್ನಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಭಾರತಿ ವಿದ್ಯಾಸಂಸ್ಥೆಯ ಮಳ್ಳಂದೀರ ಕೃಷ್ಣರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಿಬಿಎಸ್‍ಸಿ ಪಠ್ಯಾದಾರಿತ ಪ್ರಾಥಮಿಕ ಶಾಲೆ ಮತ್ತು ಪಿಯುಸಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪುಳಕಂಡ್ರ ಎಂ.ಸಂದೀಪ್, ಕಾನಡ್ಕ ಸಚ್ಚಿದಾನಂದ, ಬಿದ್ರುಪಣೆ ಬಸಪ್ಪ, ಮಳ್ಳಂದೀರ ಸುರೇಶ್, ಮಂಡೀರ ದೇವಯ್ಯ, ಬಡುವಂಡ್ರ ಲಕ್ಷ್ಮಿಪತಿ, ಪರ್ಲಕೋಟಿ ಸುನೀತ, ಕೋಚನ ಸುಬ್ಬಯ್ಯ ಮತ್ತು ಪರಿಚನ ರಾಮಪ್ಪ ಇತರರು ಇದ್ದರು. ಪ್ರಥಮ ಬಹುಮಾನವನ್ನು ನಿವೃತ್ತ ಪ್ರಾಂಶುಪಾಲರಾದ ಡಾ.ಪದ್ಮಾಜಿ ಕಾನಡ್ಕ ಅವರು, ದ್ವಿತೀಯ ಬಹುಮಾನವನ್ನು ಪರಿಚನ ರಾಮಪ್ಪ ಮತ್ತು ತೃತೀಯ ಬಹುಮಾನವನ್ನು ಕಟ್ಟೆಮನೆ ಸೋನಾಜಿತ್ ಪ್ರಾಯೋಜಿಸಿದ್ದರು.











