ಹೊಸದಿಲ್ಲಿ ಡಿ.26 NEWS DESK : ವಿಳಂಬ ಶುಲ್ಕವನ್ನು ಪಾವತಿಸದ ಮತ್ತು ಆಧಾರ್ ಕಾರ್ಡ್‌ನ್ನು ತಮ್ಮ ಪಾನ್ ಕಾರ್ಡ್ ನೊಂದಿಗೆ ಜೋಡಣೆ ಮಾಡದವರಿಗೆ ಆ ಕಾರ್ಯವನ್ನು ಮುಗಿಸಲು ಡಿ.31 ಕೊನೆಯ ದಿನಾಂಕವಾಗಿದೆ ಮತ್ತು ಅಷ್ಟರೊಳಗೆ ಆಧಾರ್ ನೊಂದಿಗೆ ಜೋಡಣೆಯಾಗಿರದ ಪಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆ ನೀಡಿದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಅಪಾಯದ ಜೊತೆಗೆ ಅಂತಹವರು ಪಾನ್ ಕಾರ್ಡ್‌ಗಳ ಬಳಕೆಯನ್ನೊಳಗೊಂಡಿರುವ ಸೇವೆಗಳ ಅಲಭ್ಯತೆಯ ಸಂಭಾವ್ಯ ಅಪಾಯವನ್ನೂ ಎದುರಿಸಬೇಕಾಗಬಹುದು. ಜುಲೈ 1,2017ರಂದು ಅಥವಾ ಅದಕ್ಕೂ ಮುನ್ನ ಪಾನ್ ಕಾರ್ಡ್ ಪಡೆದಿರುವರು ಅದನ್ನು ಆಧಾರ್ ಜೊತೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಜೋಡಣೆ ಸೇವೆಯು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಲಭ್ಯವಿದೆ ಎಂದು ಇಲಾಖೆಯು ತಿಳಿಸಿದೆ. ಹೊಸ ಪಾನ್ ಕಾರ್ಡ್ ಅರ್ಜಿದಾರರಿಗೆ ಆಧಾರ್ ಆಧರಿತ ಪರಿಶೀಲನೆಯನ್ನು ನಿಯಮಗಳು ಕಡ್ಡಾಯಗೊಳಿಸಿವೆ.










