ಮಡಿಕೇರಿ ಡಿ.27 NEWS DESK : ಕ್ರೀಡೆಯೊಂದಿಗೆ ಸಮಾಜದ ಒಳಿತಿಗಾಗಿ ಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರಯತ್ನಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಸಲಹೆ ನೀಡಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜರುಗಿದ ಬಿಲ್ಲವ ಸಮಾಜದ ಸ್ಕೋರ್ಪಿನ್ ಪ್ರೀಮಿಯರ್ ಲೀಗ್ ಸೀಸನ್ 1 ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆದ ಹಿನ್ನಲೆಯಲ್ಲಿ ಪಂದ್ಯಾವಳಿಗೆ ಸಂಪೂರ್ಣ ಸಹಕಾರ ನೀಡಿದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಆಯೋಜಕರು ಶಾಸಕರ ಗೃಹ ಕಛೇರಿಗೆ ತೆರಳಿ ಧನ್ಯವಾದಗಳನ್ನು ಸಮರ್ಪಿಸಿ, ಸನ್ಮಾನಿಸುವ ಮೂಲಕ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಯುವ ಸಮೂಹ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುವುದರಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ. ಹಾಗಾಗಿ ಎಲ್ಲಾ ಕ್ರೀಡಾಕೂಟಗಳಿಗೆ ತಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.











