ಮಡಿಕೇರಿ ಜ.2 NEWS DESK : ವಿಟಮಿನ್ ಬಿ12 (ಕೋಬಾಲಾಮಿನ್) ನಮ್ಮ ದೇಹಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಅಂದರೆ ದಿನಕ್ಕೆ 2.4 -2.8 ಮೈಕ್ರೋಗ್ರಾಂ ಬೇಕಾಗಿದ್ದರೂ, ಇದರ ಪಾತ್ರ ಬಹಳ ದೊಡ್ಡದು. ಇದೊಂದು ವಿಶಿಷ್ಟವಾದ ವಿಟಮಿನ್ ಆಗಿದ್ದು, ನಮ್ಮ ದೇಹವು ಇದನ್ನು ಹೆಚ್ಚಿನ ಪ್ರಮಾಣದಲ್ಲಿ, ವಿಶೇಷವಾಗಿ ಯಕೃತ್ತಿನಲ್ಲಿ ( ಲಿವರ್ ) ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹಾಗಾಗಿ, ಇದರ ಕೊರತೆಯು ತಕ್ಷಣವೇ ಕಾಣಿಸದೆ, ನೀವು ಸೇವಿಸುವುದನ್ನು ನಿಲ್ಲಿಸಿದರೂ ಅನೇಕ ವರ್ಷಗಳ ನಂತರ ಕಾಣಿಸಿ ಕೊಳ್ಳಬಹುದು. ಅಲ್ಲದೆ, ಇದು ಸಸ್ಯ ಮೂಲದ ಆಹಾರಗಳಲ್ಲಿ ಸಿಗದಿರುವ ಏಕೈಕ ವಿಟಮಿನ್ . ಇದರ ಕೊರತೆಯು ನರಮಂಡಲಕ್ಕೆ ಶಾಶ್ವತ ಹಾನಿ ಉಂಟುಮಾಡಬಹುದಾದ ಕೆಲವು ಅಪರೂಪದ ಪೌಷ್ಟಿಕಾಂಶ ಸಮಸ್ಯೆಗಳಲ್ಲಿ ಒಂದಾಗಿದೆ. :: ವಿಟಮಿನ್ ಬಿ12 ಕಾರ್ಯ :: ಬಿ12 ನಮ್ಮ ದೇಹದಲ್ಲಿ ಪರ್ಯಾಯವಿಲ್ಲದ, ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಕೆಂಪು ರಕ್ತ ಕಣಗಳ ರಚನೆ :: ಇದು ರಕ್ತಹೀನತೆ ಯನ್ನು ತಡೆಯುತ್ತದೆ. ಡಿಎನ್‌ಎ ಸಂಶ್ಲೇಷಣೆ : : ಪ್ರತಿಯೊಂದು ಜೀವಕೋಶದ ವಿಭಜನೆಗೂ ಇದು ಅಗತ್ಯ. ನರಮಂಡಲದ ನಿರ್ವಹಣೆ : : ನರಗಳ ಸುತ್ತಲಿನ ಮೈಲಿನ್ ಪೊರೆ ರಚನೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಹೋಮೋಸಿಸ್ಟೈನ್ ನಿಯಂತ್ರಣ : : ದೇಹದಲ್ಲಿ ಹೋಮೋಸಿಸ್ಟೈನ್ ಮಟ್ಟ ಹೆಚ್ಚಿದ್ದರೆ, ಅದು ಹೃದಯಾಘಾತ, ಪಾರ್ಶ್ವವಾಯು ಮತ್ತು ಬುದ್ಧಿಮಾಂದ್ಯತೆಗೆ ಅಪಾಯಕಾರಿ. ಬಿ12 ಇದನ್ನು ನಿಯಂತ್ರಿಸುತ್ತದೆ. ನೀವು ಈಗಾಗಲೇ ಸಾಕಷ್ಟು ಬಿ12 ಹೊಂದಿದ್ದರೆ ಅದು ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಆದರೆ ಇದರ ಕೊರತೆಯು ತೀವ್ರವಾದ ಆಯಾಸಕ್ಕೆ ಕಾರಣವಾಗುತ್ತದೆ. ಬಿ12 ಕೊರತೆಯ ಲಕ್ಷಣಗಳು ಬಹಳ ಸೂಕ್ಷ್ಮವಾಗಿ ಪ್ರಾರಂಭವಾಗಿ, ನಿಧಾನವಾಗಿ ಗಂಭೀರವಾಗುತ್ತವೆ. :: ಲಕ್ಷಣಗಳು : : ತೀವ್ರ ಆಯಾಸ, ದೌರ್ಬಲ್ಯ, ಚರ್ಮ ಬಿಳುಚಿಕೊಳ್ಳುವುದು ಅಥವಾ ಕಾಮಾಲೆ (ಜಾಂಡೀಸ್) ಕಾಣಿಸುವುದು. ಹೃದಯ ಬಡಿತ ಹೆಚ್ಚಳ, ಉಸಿರಾಟದ ತೊಂದರೆ. ಮಿದುಳಿನ ಮಬ್ಬು , ಜ್ಞಾಪಕ ಶಕ್ತಿಯ ವ್ಯತ್ಯಾಸ (ಮರೆವು ), ಏಕಾಗ್ರತೆಯ ಕೊರತೆ. :: ನರವೈಜ್ಞಾನಿಕ ಲಕ್ಷಣಗಳು :: ಕೈ-ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮ್ಮೆನ್ನುವುದು, ನಡೆಯಲು ಕಷ್ಟವಾಗುವುದು, ಸಮತೋಲನದ ಸಮಸ್ಯೆಗಳು, ಮನಸ್ಸಿನ ಬದಲಾವಣೆಗಳು – ಕಿರಿಕಿರಿ, ಖಿನ್ನತೆ, ತೀವ್ರ ಸಂದರ್ಭಗಳಲ್ಲಿ ಮಾನಸಿಕ ಅಸ್ವಸ್ಥತೆ, ಊದಿಕೊಂಡ, ನಯವಾದ, ಕೆಂಪು ನಾಲಿಗೆ ಮತ್ತು ಬಾಯಿಯ ಹುಣ್ಣುಗಳು. :: ಯಾರಿಗೆ ಹೆಚ್ಚಿನ ಅಪಾಯವಿದೆ..? :: ಸಸ್ಯಾಹಾರಿಗಳು ಬಿ12 ಪೂರಕಗಳನ್ನು ತೆಗೆದುಕೊಳ್ಳದಿದ್ದರೆ., ವಯಸ್ಸಾದಂತೆ ಹೊಟ್ಟೆಯ ಆಮ್ಲ ಕಡಿಮೆಯಾಗುವುದರಿಂದ ಹೀರಿಕೊಳ್ಳುವಿಕೆ ಕಡಿಮೆಯಾಗುವುದರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು, ಮೆಟ್‌ಫಾರ್ಮಿನ್, ರಾನಿಟಿಡಿನ್, ಓಮೇಜ್ ನಂತಹ ಪ್ರೋಟಾನ್ ಪಂಪ್ ಇನ್ಹಿಬಿಟರ್‌ಗಳನ್ನು ದೀರ್ಘಕಾಲದವರೆಗೆ ಬಳಸುವವರು, ಹೊಟ್ಟೆಯ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳು. :: ವಿಟಮಿನ್ ಬಿ12 ನ ಉತ್ತಮ ಆಹಾರ ಮೂಲಗಳು :: ಬಿ12 ಮುಖ್ಯವಾಗಿ ಪ್ರಾಣಿ ಉತ್ಪನ್ನಗಳಲ್ಲಿ ಕಂಡು ಬರುತ್ತದೆ. ಮಾಂಸ, ಕೋಳಿ, ಯೀಸ್ಟ್ , ಮೀನುಗಳಲ್ಲಿ ಮತ್ತಿ/ ಭೂತಾಯಿ (ಸಾರ್ಡೀನ್ಸ್, ) , ರಾವು ಮೀನು (ಸಾಲ್ಮನ್ ) ಮತ್ತು ಚಿಪ್ಪು ಮೀನು ಬಿ12 ಸೇರಿಸಿದ ( ಸಪ್ಲಿಮೆಂಟ್ ) ಸಸ್ಯ ಆಧಾರಿತ ಹಾಲು , ಮೊಟ್ಟೆ, ಮತ್ತು ಡೈರಿ ಉತ್ಪನ್ನಗಳು , ಬಲವರ್ಧಿತ ಧಾನ್ಯಗಳು. :: ಬಿ12 ಹೀರಿಕೊಳ್ಳುವಿಕೆಯನ್ನು ತಡೆಯುವ ಅಂಶಗಳು :: ಅತಿಯಾದ ಮದ್ಯಪಾನ, ಊಟದೊಂದಿಗೆ ಅಧಿಕ ಪ್ರಮಾಣದ ವಿಟಮಿನ್ ಸಿ. ಹೆಚ್ಚಿನ ಕಾಫಿ/ಟೀ ಸೇವನೆ, :: ನಿಮ್ಮ ದೇಹವನ್ನು ರಕ್ಷಿಸಲು ಈ ಸಲಹೆಗಳನ್ನು ಅನುಸರಿಸಿ :: ನೀವು ವಾರಕ್ಕೆ 3-4 ಬಾರಿ ಮಾಂಸ ಮತ್ತು ಇತರ ಪ್ರಾಣಿ ಉತ್ಪನ್ನಗಳನ್ನು ಸೇವಿಸಿದರೆ, ನಿಮಗೆ ಬಿ12 ಕೊರತೆ ಬರುವುದು ಅಸಾಧ್ಯ. :: ನೀವು ಸಂಪೂರ್ಣ ಸಸ್ಯಾಹಾರಿ ಆಗಿದ್ದರೆ :: ಪ್ರತಿದಿನ 250-500 ಮೈಕ್ರೋಗ್ರಾಂ ಮೆಥಿಲ್ಕೋಬಾಲಾಮಿನ್ ಅಥವಾ ವಾರಕ್ಕೆ 2-3 ಬಾರಿ 1000 ಮೈಕ್ರೋಗ್ರಾಂ ತೆಗೆದುಕೊಳ್ಳಿ. 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿದಿನ 100-500 ಮೈಕ್ರೋಗ್ರಾಂ ಪೂರಕವನ್ನು ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಬಿ12 ಮಟ್ಟದ ಬಗ್ಗೆ ನಿಮಗೆ ಸಂಶಯವಿದ್ದರೆ, ದಯವಿಟ್ಟು ತಜ್ಞ ವೈದ್ಯರನ್ನು ಸಂಪರ್ಕಿಸಿ.
ಲೇಖನ :: ಡಾ.ಕೆ.ಬಿ.ಸೂರ್ಯಕುಮಾರ್












