
ಮಡಿಕೇರಿ NEWS DESK ಜ.4 : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ನಿರ್ಮಾಣ ಯೋಜನೆ ಅನುಷ್ಠಾನ ಉದ್ದೇಶದಿಂದ ಕೈಗೊಂಡಿದ್ದ ಸಮತಟ್ಟು ಕಾರ್ಯಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ತಡೆಯೊಡ್ಡಿದ್ದಾರೆ. ಹುಲುಸೆಯಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರಕ್ಕೆ ಕಂದಾಯ ಇಲಾಖೆಯಿಂದ ಸ್ಥಳ ಗುರುತಿಸಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ದಿಢೀರನೆ ಬೆಟ್ಟ ಅಗೆದು ಸಮತಟ್ಟು ಮಾಡುವ ಕಾರ್ಯ ಕೈಗೊಳ್ಳಲಾಗಿತ್ತು. ಈ ಸಂದರ್ಭ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದರು. ಬೆಟ್ಟಅಗೆಯುವ ಕಾಮಗಾರಿ ಪ್ರಾರಂಭಿವಾಗಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಹಕ್ಕೆ, ಮರೂರು ಗ್ರಾಮಸ್ಥರು ಹಿಟಾಚಿ ತಡೆಹಿಡಿದು ಕಾಮಗಾರಿ ನಿಲ್ಲಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದರು. ಹುಲುಸೆಯಲ್ಲಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಲು ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಪಡೆದಿಲ್ಲ. ಕಾಮಗಾರಿ ಕಾರಣ ಅಪಾರ ಪ್ರಮಾಣದಲ್ಲಿ ಮರಗಳ ಹನನ ನಡೆಯಲಿದೆ, ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾ.ಪಂ, ತಾಲ್ಲೂಕು ಆಡಳಿತ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ರಾತ್ರೋರಾತ್ರಿ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಬಾರದು. ಒಂದು ವೇಳೆ ಕಾಮಗಾರಿ ಮುಂದುವರೆಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಹೆಬ್ಬಾಲೆ ಗ್ರಾ.ಪಂ ಸದಸ್ಯೆ ಪುಟ್ಟಲಕ್ಷ್ಮಿ, ಸಾಮಾಜಿಕ ಹೋರಾಟಗಾರ ಮೋಹನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.








