
ಮಡಿಕೇರಿ NEWS DESK ಜ.4 : ಸರಕಾರದ ಕಾರ್ಯಕ್ರಮಗಳು ಯಶಸ್ವಿಯಾಗಲು ಮತ್ತು ಜನರಿಗೆ ಸೌಲಭ್ಯಗಳು ತಲುಪಲು ನೌಕರರ ಪಾತ್ರ ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿರಾಜಪೇಟೆ ಘಟಕದ ಮಹಾಸಭೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಯೊಂದು ಸಂಘವು ಅದರ ಸದಸ್ಯರ ಏಳಿಗೆಗಾಗಿ ಶ್ರಮಿಸಬೇಕು. ಇಂದು ಸರಕಾರ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಕೈಗೊಳ್ಳಲು ನೌಕರರ ಪಾತ್ರ ದೊಡ್ಡದಾಗಿದೆ. ಇದನ್ನು ಪ್ರತಿಯೊಬ್ಬರು ಅರಿತುಕೊಂಡು ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು. ಸಾರ್ವಜನಿಕ ಸೇವೆ ಕೇವಲ ಉದ್ಯೋಗವಲ್ಲ, ಅದು ಸಮಾಜ ಸೇವೆ. ಇಂದಿನ ಕಾರ್ಯಕ್ರಮದಲ್ಲಿ ನೌಕರರನ್ನು ಪ್ರೋತ್ಸಾಹಿಸುವ ಜೊತೆಗೆ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದ್ದು, ಇದು ಸಾರ್ಥಕತೆ ಮೂಡಿಸುತ್ತದೆ ಎಂದರು. ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.









