
ಮಡಿಕೇರಿ ಜ.5 NEWS DESK : ಪಿಎಸ್‌ಎ ಪ್ರಾಯೋಜಕತ್ವದಲ್ಲಿ ಆರ್ಜಿ ಆಶೀರ್ವಾದ್ ಟರ್ಫ್ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ನ್ಯಾನೋ ಕ್ರಿಕೆಟ್ ಲೀಗ್ ಸೀಸನ್ 1 ಅತ್ಯಂತ ಯಶಸ್ವಿಯಾಗಿ ನಡೆಯಿತು. ಲೀಗ್‌ನ ರೋಚಕ ಅಂತಿಮ ಪಂದ್ಯದಲ್ಲಿ ಮೊಹಮ್ಮದ್ ಮುಸ್ತಫ ಅವರ ಮಾಲೀಕತ್ವದ ಬ್ರದರ್ಸ್ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಸಿಯಾಬ್ ಅವರ ಮಾಲೀಕತ್ವದ ಸ್ಟ್ರೈಕರ್ಸ್ ಅಂಬಟ್ಟಿ ತಂಡ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡು ಪ್ರಶಂಸೆಗೆ ಪಾತ್ರವಾಯಿತು. ಪಂದ್ಯಾವಳಿಯ ವೈಯಕ್ತಿಕ ಪ್ರಶಸ್ತಿಗಳಲ್ಲಿ ಸಜೀರ್ ಎ.ಎಸ್. ಅವರು ಟೂರ್ನಮೆಂಟ್ ಅವಧಿಯಲ್ಲಿನ ಶ್ರೇಷ್ಠ ಸರ್ವಾಂಗೀಣ ಪ್ರದರ್ಶನಕ್ಕಾಗಿ ‘ಸರಣಿಯ ಶ್ರೇಷ್ಠ ಆಟಗಾರ (Man of the Series)’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜೊತೆಗೆ ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್ ಹಾಗೂ ಅತ್ಯಧಿಕ ಫೋರ್‌ಗಳನ್ನು ಬಾರಿಸಿದ ಆಟಗಾರ ಎಂಬ ಮೂರು ಪ್ರಮುಖ ಪ್ರಶಸ್ತಿಗಳನ್ನೂ ಪಡೆದುಕೊಂಡರು. ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಆಶಿಕ್ ಪಡೆದರೆ, ಉತ್ತಮ ಫೀಲ್ಡರ್ ಪ್ರಶಸ್ತಿಯನ್ನು ನಿಹಾಲ್ ಎಂ.ಎಸ್. ಅವರು ತಮ್ಮ ಪಾಲಾಗಿಸಿಕೊಂಡರು. ಸ್ಥಳೀಯ ಕ್ರೀಡಾಭಿಮಾನಿಗಳ ಭಾರೀ ಬೆಂಬಲದೊಂದಿಗೆ ನಡೆದ ನ್ಯಾನೋ ಕ್ರಿಕೆಟ್ ಲೀಗ್, ಗ್ರಾಮೀಣ ಹಾಗೂ ಸ್ಥಳೀಯ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ಆಯೋಜಕರಾದ ಪ್ರಮೋದ್, ಸುಮಂತ್,ಆಶಿಕ್ ತಿಳಿಸಿದರು.









