
ಮಡಿಕೇರಿ ಜ.8 NEWS DESK : ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅವಮಾನಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿಯ ಎಸ್‍ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಶಾಸಕರಿಗೆ ಶ್ರದ್ಧಾಂಜಲಿ ಅರ್ಪಿಸಿ ಕಟುವಾದ ಶಬ್ಧಗಳಿಂದ ನಿಂದಿಸುವ ಮೂಲಕ ವಿಕೃತಿಯನ್ನು ಮರೆದಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕಿ ಭಾಗೀರಥಿ ಅವರು ಎಲ್ಲಾ ಮಹಿಳೆಯರಿಗೆ ಪ್ರೇರಣಾದಾಯಕರಾಗಿದ್ದಾರೆ. ಆದರೆ ರಾಜಕೀಯ ದುರುದ್ದೇಶದಿಂದ ಪರಿಶಿಷ್ಟ ಸಮಾಜದ ಮಹಿಳೆಯೊಬ್ಬರಿಗೆ ಅಗೌರವ ತೋರಲಾಗಿದೆ. ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ, ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಕೂಡ ಅವಮಾನಿಸಲಾಗಿದೆ. ಬಿಜೆಪಿ ಪಕ್ಷ ಮಹಿಳೆಯರು ಹಾಗೂ ಪರಿಶಿಷ್ಟರಿಗೆ ಸಮಾನ ರಾಜಕೀಯ ಅವಕಾಶ ಮತ್ತು ಅಧಿಕಾರವನ್ನು ನೀಡುತ್ತಿದೆ. ಇದನ್ನು ಸಹಿಸದ ಕಿಡಿಗೇಡಿಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸಂದೇಶ್ ಎಂಬಾತ ಶಾಸಕರನ್ನು ಅಪಮಾನಿಸಿರುವ ಕುರಿತು ತಿಳಿದುಬಂದಿದ್ದು, ಈ ರೀತಿಯ ಅನಾಗರೀಕ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.









