
ಮಡಿಕೇರಿ NEWS DESK ಜ.9 : ಕೊಡಗು ಜಿಲ್ಲಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರಿಗೆ ವಿಧಾನ ಪರಿಷತ್ ಸ್ಥಾನ ಮತ್ತು ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ ಸಲ್ಲಿಸಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅಲ್ಪಸಂಖ್ಯಾತ ಮುಖಂಡರು ಕೊಡಗು ಜಿಲ್ಲೆಯ ಶೇ.99 ರಷ್ಟು ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಗಮನ ಸೆಳೆದರು. ಯಾವುದೇ ಚುನಾವಣೆ ಬಂದರೂ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸದ ಅಲ್ಪಸಂಖ್ಯಾತರು ಇತರ ಪಕ್ಷಗಳನ್ನು ಬೆಂಬಲಿಸದೆ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಇದೀಗ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ಆದರೆ ಕೊಡಗಿನ ಅಲ್ಪಸಂಖ್ಯಾತರಿಗೆ ಅಧಿಕಾರ ಸ್ಥಾನದಲ್ಲಿ ಯಾವುದೇ ಸ್ಥಾನಮಾನ ದೊರೆಯದೆ ಇರುವುದು ಬೇಸರ ಮೂಡಿಸಿದೆ. ಆದ್ದರಿಂದ ವಿಧಾನ ಪರಿಷತ್ ಸ್ಥಾನ ಮತ್ತು ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನವನ್ನು ನೀಡಿ ಪಕ್ಷಕ್ಕೆ ನಾವು ನೀಡುತ್ತಿರುವ ಬೆಂಬಲಕ್ಕೆ ಪ್ರತಿಫಲ ನೀಡಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಎ.ಉಸ್ಮಾನ್ ಮಾತನಾಡಿ ಜಿಲ್ಲೆಯ ಇಬ್ಬರು ಶಾಸಕರು ಅತ್ಯುತ್ತಮ ರೀತಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ನಡೆಯದಂತಹ ಅಭಿವೃದ್ಧಿ ಕಾರ್ಯಗಳು ಇವರಿಂದ ಆಗುತ್ತಿದೆ. ಕೊಡಗಿನ ಅಲ್ಪಸಂಖ್ಯಾತ ಸಮುದಾಯ ಸದಾ ಈ ಇಬ್ಬರು ಶಾಸಕರ ಬೆಂಬಲಕ್ಕೆ ನಿಂತಿದೆ. ಆದ್ದರಿಂದ ಅಲ್ಪಸಂಖ್ಯಾತರಿಗೂ ಸೂಕ್ತ ಸ್ಥಾನಮಾನ ನೀಡಬೇಕೆನ್ನುವುದು ನಮ್ಮ ಮನವಿಯಾಗಿದೆ ಎಂದರು. ಶಾಸಕದ್ವಯರು ಕೂಡ ಅಲ್ಪಸಂಖ್ಯಾತ ಮುಖಂಡರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಸ್ಮಾಯಿಲ್ ಕೆ.ಎ., ಹಂಸ ಹೆಚ್.ಎ,, ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್, ಪ್ರಮುಖರಾದ ಕೂಡಿಗೆ ಹಮೀದ್ ಸೇರಿದಂತೆ ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮುಖಂಡರು ಈ ಸಂದರ್ಭ ಹಾಜರಿದ್ದರು.








