
ಮಡಿಕೇರಿ NEWS DESK ಜ.9 : ಕೂರ್ಗ್ ಟೇಬಲ್ ಟೆನ್ನಿಸ್ ಯೂತ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ “ಕೂರ್ಗ್ ಚಾಂಪಿಯನ್ ಶಿಪ್ ಕಪ್-2026” ಪಂದ್ಯಾವಳಿಯು ಜ.16, 17 ಹಾಗೂ 18 ರಂದು ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಜ.16 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಖ್ಯಾತಿ ಉದ್ಯಮಿ ಯಶಿಲಾ ಉತ್ತಯ್ಯ ಚಿಯಕ್ ಪೂವಂಡ ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ ಚಕ್ರವರ್ತಿ, ಕೊಡಗು ವೈದ್ಯಕೀಯ ಕಾಲೇಜ್ ನ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹಾಗೂ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್ ಪಾಲ್ಗೊಳ್ಳಲಿದ್ದಾರೆ. ಜ.18 ರಂದು ಸಂಜೆ 5 ಗಂಟೆಗೆ ಪಂದ್ಯಾವಳಿಯ ಸಮಾರೋಪ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಕರ್ನಾಟಕ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಂಗಡ ಬಬಿನ್ ಬೋಪಣ್ಣ ಹಾಗೂ ಜೀಬ್ರ ರಾಕ್ಸ್ ಸಂಸ್ಥೆ ಮಾಲೀಕರಾದ ಎಂ.ಸುಬ್ರಮಣಿ ನಾಣಯ್ಯ ಭಾಗವಹಿಸಲಿದ್ದಾರೆ. ಪಂದ್ಯಾವಳಿಯ ವಿಜೇತರಿಗೆ ಆಕರ್ಷಕ ಟ್ರೋಫಿ, ಪದಕ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ 16 ವರ್ಷದೊಳಗಿನ ವಿಭಾಗ, ಪದವಿ ಪೂರ್ವ ಹಾಗೂ ಪದವಿ ಕಾಲೇಜು 21 ವರ್ಷದೊಳಗಿನ ವಿಭಾಗ, ಪುರುಷರ ಹಾಗೂ ಮಹಿಳೆಯರ 30 ವರ್ಷ ಮೇಲ್ಪಟ್ಟವರ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕ 16 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಸಿಂಗಲ್ಸ್ ವಿಭಾಗ ರೂ.100, ಡಬಲ್ಸ್ ರೂ.200, 21 ವರ್ಷದೊಳಗಿನ ಬಾಲಕ, ಬಾಲಕಿಯರ ಸಿಂಗಲ್ಸ್ ವಿಭಾಗಕ್ಕೆ ರೂ.200, ಡಬಲ್ಸ್ ಗೆ ರೂ.300, ಪುರುಷ ಹಾಗೂ ಮಹಿಳೆಯರ ವಿಭಾಗ ಸಿಂಗಲ್ಸ್ ರೂ.500, ಡಬಲ್ಸ್ ಗೆ ರೂ.1000 ಶುಲ್ಕ ನಿಗಧಿ ಪಡಿಸಲಾಗಿದೆ. ಆಸಕ್ತರು ಜ.15 ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ರಚನ್ ಪೊನ್ನಪ್ಪ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಮಲ್ಲೇಂಗಡ ರಚನ್ ಪೊನ್ನಪ್ಪ – 9483598761, 9110677030 ಸಂಪರ್ಕಿಸಬಹುದು. ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಉತ್ತಮ ಪ್ರತಿಭೆಗಳೆಂದು ಆಯ್ಕೆಯಾಗುವ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ ತಿಂಗಳಿನಲ್ಲಿ ಮುಕ್ತ ತರಬೇತಿ ಶಿಬಿರವನ್ನು ನಡೆಸಲಾಗುವುದು. ಟೇಬಲ್ ಟೆನ್ನಿಸ್ ಕ್ರೀಡೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ, ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಜಿಲ್ಲೆಯ ಮಕ್ಕಳಲ್ಲಿ ಈ ಕ್ರೀಡೆಯ ಕುರಿತು ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಕೂಡ ಟೇಬಲ್ ಟೆನ್ನಿಸ್ ಕ್ರೀಡೆಯ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ಕಾರ್ಯದರ್ಶಿಗಳಾದ ಕಲ್ಲೇಂಗಡ ಹರೀಶ್ ಕಾರ್ಯಪ್ಪ, ಬೈರೇಟಿರ ಮೊಣ್ಣಪ್ಪ, ಸದಸ್ಯರಾದ ಕಳ್ಳಿಚಂಡ ಬೋಪಣ್ಣ ಹಾಗೂ ಫೇಬ್ ಕೃಸ್ಟಿ ಉಪಸ್ಥಿತರಿದ್ದರು.








